ನ್ಯೂಸ್ ನಾಟೌಟ್: ಸಾರ್ವಜನಿಕ ಕಾರ್ಯಕ್ರಮ ನಡೆಸುವಾಗ ಹಲವು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸ್ಥಳೀಯ ಪೊಲೀಸ್ ಠಾಣೆಯಿಂದ ಅನುಮತಿ ಪಡೆದಿರಬೇಕು. ಅನುಮತಿ ನೀಡುವ ಮುಂಚೆ ಪೊಲೀಸರು ಬಂದು ಸ್ಥಳ ಮತ್ತು ವ್ಯವಸ್ಥೆ ಪರಿಶೀಲನೆ ನಡೆಸುವುದು ಅಗತ್ಯ. ಆದರೆ, ಯುಗಾದಿ ಉತ್ಸವದ ಆಚರಣೆಯ ವೇಳೆ ರಥವೊಂದನ್ನು ಎಳೆಯುತ್ತಿದ್ದ ಸಂದರ್ಭ ರಥದ ತುದಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಕನಿಷ್ಠ 13 ಮಕ್ಕಳು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನ ಟೇಕೂರ್ ಗ್ರಾಮದಲ್ಲಿ ಗುರುವಾರ(ಎ.11) ಸಂಭವಿಸಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಥೋತ್ಸವ ನಡೆದಿತ್ತು ಈ ವೇಳೆ ರಥವನ್ನು ಎಳೆದುಕೊಂಡು ಸಾಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಕರ್ನೂಲ್ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್ ಮಾತನಾಡಿ ರಥೋತ್ಸವ ಸಂದರ್ಭ ನಡೆದ ಘಟನೆಯಲ್ಲಿ ಕನಿಷ್ಠ ಹದಿಮೂರು ಮಂದಿ ಮಕ್ಕಳು ಗಾಯಗೊಂಡಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.