ನ್ಯೂಸ್ ನಾಟೌಟ್ : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಇನ್ನೂ ಮಾಸಿಲ್ಲ. ಆತನ ಸಾವು ಆತ್ಮಹತ್ಯೆ ಎಂದು ಹೇಳಲಾಗುತ್ತಿದೆಯಾರೂ ಈ ಬಗ್ಗೆ ಖಚಿತ ಮಾಹಿತಿ ಇಲ್ಲ. ಕೊಲೆ ಇರಬಹುದು ಅನ್ನುವುದು ಕೂಡ ಬಾಲಿವುಡ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೀಗ ಸುಶಾಂತ್ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅಂದು ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನು ನಟಿ ಅದಾ ಶರ್ಮಾ ಖರೀದಿಸಿದ್ದಾರೆ.
ಮುಂಬೈನ ಮೋಂಟ್ ಬ್ಲ್ಯಾಂಕ್ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ವಾಸ ಮಾಡುತ್ತಿದ್ದರು. 2020ರ ಜೂನ್ 14ರಂದು ಅವರು ಸಾವನ್ನಪ್ಪಿದ್ದರು. ಇದಾದ ಬಳಿಕ ಈ ಫ್ಲ್ಯಾಟ್ ಖಾಲಿಯೇ ಉಳಿದಿತ್ತು. ಯಾರೊಬ್ಬರೂ ಈ ಮನೆಯಲ್ಲಿ ಉಳಿದುಕೊಳ್ಳಲು ಕೂಡ ಮುಂದೆ ಬಂದಿರಲಿಲ್ಲ. ಹೀಗಾಗಿ, ಇದರ ಮಾಲೀಕರು ಈ ಅಪಾರ್ಟ್ಮೆಂಟ್ನ ಮಾರುವ ನಿರ್ಧಾರಕ್ಕೆ ಬಂದಿದ್ದರು. ನಂತರ ಅದಾ ಶರ್ಮಾ ಇದನ್ನು ಖರೀದಿ ಮಾಡಿದ್ದಾರೆ.
ಅದಾ ಶರ್ಮಾ ಖರೀದಿ ಮಾಡಿದ್ದೇಕೆ..?
ಯಾರಿಗೂ ಬೇಡವಾಗಿದ್ದ ಮನೆಯನ್ನು ಆದಾ ಶರ್ಮಾ ಖರೀದಿ ಮಾಡಿದ್ದೇಕೆ ಅನ್ನುವುದರ ಬಗ್ಗೆಯೇ ಇದೀಗ ಭಾರಿ ಚರ್ಚೆ ಶುರುವಾಗಿದೆ. ಈ ಬಗ್ಗೆ ಜಾಲತಾಣದಲ್ಲಿ ಕಾಮೆಂಟ್ ಕೇಳಿ ಬರುತ್ತಿರುವ ಬೆನ್ನಲ್ಲೇ ಸ್ವತಃ ಅದಾ ಶರ್ಮಾ ಮಾತನ್ನಾಡಿದ್ದಾರೆ. ಅವರು ಹೇಳಿದ್ದು ಹೀಗೆ, ‘ನಾನು ಎಲ್ಲರ ಹೃದಯದಲ್ಲಿ ವಾಸಿಸುತ್ತಿದ್ದೇನೆ. ಮಾತನಾಡಲು ಇದು ಸರಿಯಾದ ಸಮಯ. ನಾನು ಆ ಮನೆ ನೋಡಲು ಹೋದಾಗ ಮಾಧ್ಯಮದ ಗಮನ ಸಂಪೂರ್ಣವಾಗಿ ನನ್ನ ಮೇಲೆ ಇತ್ತು. ನಾನು ಖಾಸಗಿ ವಿಚಾರವನ್ನು ನನ್ನಲ್ಲೇ ಇಟ್ಟುಕೊಳ್ಳಲು ಬಯಸುವ ವ್ಯಕ್ತಿ. ನನ್ನ ಸಿನಿಮಾಗಳಿಗಾಗಿ ಮಾತ್ರ ಸುದ್ದಿಯಲ್ಲಿ ಇರಲು ಬಯಸುತ್ತೇನೆ. ನಾನು ಉಳಿದ ವಿಚಾರಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳಲು ಇಷ್ಟಪಡುತ್ತೇನೆ’ ಎಂದಿದ್ದಾರೆ. ಸುಶಾಂತ್ ಸಿಂಗ್ ಮೃತಪಟ್ಟ ಬಳಿಕ ಅವರ ಬಗ್ಗೆ ಕೆಲವರು ತಪ್ಪಾಗಿ ಮಾತನಾಡಿದ್ದರು. ಅವರು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದೆಲ್ಲ ಹೇಳಿದ್ದರು. ಈ ವಿಚಾರ ಕೇಳಿ ಅದಾ ಶರ್ಮಾಗೆ ಬೇಸರ ಆಗಿತ್ತಂತೆ. ‘ಈ ಜಗತ್ತಿನಲ್ಲಿ ಇಲ್ಲದ ವ್ಯಕ್ತಿಯ ಬಗ್ಗೆ ಮಾತನಾಡುವುದು ತಪ್ಪು ಎಂದು ನಾನು ಭಾವಿಸಿದೆ. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಹೀಗಾಗಿ, ನಾನು ಆ ಮನೆ ಖರೀದಿಸಿದೆ. ಅವರ ಬಗ್ಗೆ ಮಾಡಿದ ಕೆಲವು ಕಮೆಂಟ್ಗಳನ್ನು ನೋಡಿದೆ. ನನ್ನನ್ನು ಟ್ರೋಲ್ ಮಾಡಿ. ಆದರೆ, ಜಗತ್ತಿನಲ್ಲಿ ಇಲ್ಲದ ಆ ವ್ಯಕ್ತಿ ಬಗ್ಗೆ ಮಾತನಾಡಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾರೆ.