ನ್ಯೂಸ್ ನಾಟೌಟ್: ಕೆಲವು ಸಲ ನಮ್ಮದೇ ನಾಯಿ ಆಗಿದ್ದರೂ ಕೂಡ ಹುಷಾರಾಗಿರಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೆ ನೇರವಾಗಿ ಆಸ್ಪತ್ರೆಗೆ ಸೇರಬೇಕಾಗುತ್ತದೆ. ಹೌದು, ಇಲ್ಲೊಂದು ಅಂತಹ ದುರ್ಘಟನೆ ನಡೆದಿರುವುದು ಬೆಳ್ತಂಗಡಿಯಿಂದ ವರದಿಯಾಗಿದೆ.
ಮಹಿಳೆಯೊಬ್ಬರು ತಮ್ಮ ಮನೆಯ ಸಾಕು ನಾಯಿ ಜೊತೆ ಆಟವಾಡುತ್ತಿದ್ದರು. ಶ್ವಾನವೂ ಕೂಡ ಅವರೊಂದಿಗೆ ಜೋಶ್ ನಿಂದ ಆಟವಾಡುತ್ತಿತ್ತು. ಆದರೆ ಆ ಶ್ವಾನಕ್ಕೆ ಇದ್ದಕ್ಕಿದ್ದಂತೆ ಏನಾಯಿತೋ ಗೊತ್ತಿಲ್ಲ. ಏಕಾಏಕಿ ಮಹಿಳೆ ಮೇಲೆ ದಾಳಿ ಮಾಡುವುದಕ್ಕೆ ಆರಂಭಿಸಿತು. ದಾಳಿಯಲ್ಲಿ ಅವರ ತಲೆಭಾಗವನ್ನು ಸೀಳಿತು, ಮಾತ್ರವಲ್ಲ ಕೈಗೆ ಗಂಭೀರ ಗಾಯವನ್ನು ಉಂಟು ಮಾಡಿತು. ಏ.18 ರಂದು ಮಧ್ಯಾಹ್ನ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.
ನಿಡಿಗಲ್ ಓಂಕಾರ್ ನಿವಾಸಿ ದಿ.ರಾಮ್ ದಾಸ್ ಪ್ರಭು ಅವರ ಪತ್ನಿ ಪೂರ್ಣಿಮಾ (49) ಎಂಬವರು ತಮ್ಮ ಮನೆಯ ಸಾಕು ನಾಯಿ ದಾಳಿಗೆ ತುತ್ತಾದವರಾಗಿದ್ದಾರೆ. ಮಹಿಳೆ ಕಾಲು ಜಾರಿ ನೆಲಕ್ಕೆ ಜಾರಿಬಿದ್ದ ವೇಳೆ ಸಾಕು ನಾಯಿ ಮಹಿಳೆಯ ಮೇಲೆ ದಾಳಿ ಮಾಡಿ ತಲೆ ಭಾಗವನ್ನು ಸೀಳಿ ಹಾಕಿದ್ದು. ಕೈಗೆ ಕಚ್ಚಿ ಗಂಭೀರ ಗಾಯಮಾಡಿದೆ ಎಂದು ಹೇಳಲಾಗಿದೆ.