ನ್ಯೂಸ್ ನಾಟೌಟ್:ನಿಮ್ಮಲ್ಲಿ ಹೆಚ್ಚಿನವರಿಗೆ ಈ ಘಟನೆ ಅನುಭವಕ್ಕೆ ಬಂದಿರಬಹುದು. ನೀವು ರಾತ್ರಿ ಹೊತ್ತಲ್ಲಿ ಬೈಕ್ನಲ್ಲಿ ಹೋಗ್ತಾ ಇರುವಾಗ ನಿಮ್ಮ ಬೈಕ್ ಹಿಂದೆ ನಾಯಿಗಳು ಓಡೋಡಿ ಬರೋದನ್ನು ಗಮನಿಸಿರಬಹುದು.ಮಾತ್ರವಲ್ಲ,ಆ ಟೈಮ್ನಲ್ಲಿ ನಿಮ್ಗೂ ಏನು ಮಾಡಬೇಕೆಂದು ತೋಚದ ಪರಿಸ್ಥಿತಿ ನಿಮ್ಮದಾಗುತ್ತೆ.ಕಾರಿದ್ದವರು ಹೇಗಾದರೂ ಬಚಾವ್ ಆಗಬಹುದು.ಆದರೆ ಬೈಕ್ ಸವಾರರಿಗೆ ಇದು ಸ್ವಲ್ಪ ಕಷ್ಟ.ಏಕೆಂದರೆ ಆ ಟೈಮ್ನಲ್ಲಿ ನೀವು ವೇಗವಾಗಿ ಹೋದಾಗ ಮುಂದಿರುವ ವಾಹನಗಳನ್ನು ಗಮನಿಸದೇ ಅಪಘಾತ ಸಂಭವಿಸಲೂ ಬಹುದು. ಅಷ್ಟಕ್ಕೂ ಈ ನಾಯಿಗಳು ಏಕಾಏಕಿ ವಾಹನಗಳ ಹಿಂದೆ ಏಕೆ ಓಡಲು ಪ್ರಾರಂಭಿಸುತ್ತವೆ ಎಂದು ನಿಮಗೆ ಗೊತ್ತಿದೆಯಾ?ಅದಕ್ಕೆ ಉತ್ತರ ಇಲ್ಲಿದೆ ನೋಡಿ..
ನಾಯಿಗಳನ್ನು ಅತ್ಯಂತ ನಿಷ್ಠಾವಂತ ಮತ್ತು ಮಾನವ ಸ್ನೇಹಿ ಪ್ರಾಣಿಗಳೆಂದು ಹೇಳಿದ್ರೂ ಕೂಡ ಆ ರಾತ್ರಿ ಟೈಮ್ನಲ್ಲಿ ಬದ್ಧವೈರಿಗಳಂತೆ ಕಾಣತೊಡಗುತ್ತವೆ.ಆ ವೇಳೆ ವಾಹನಗಳನ್ನು ಹಿಂಬಾಲಿಸಿಕೊಂಡು ಬಂದು ಭಯ ಹುಟ್ಟಿಸಿ ಕೈ ಕಾಲೇ ಅಲ್ಲಾಡದಂಗೆ ಮಾಡಿಬಿಡುತ್ತವೆ. ತಮ್ಮ ಶಕ್ತಿಗೂ ಮೀರಿ ವೇಗವಾಗಿ ಓಡಿ ವಾಹನಗಳನ್ನು ಹಿಂಬಾಲಿಸುತ್ತವೆ.
ಒಂದು ವೇಳೆ ನಿಮ್ಮ ಬಟ್ಟೆ ಸಿಕ್ಕರೆ ಅಲ್ಲಿಗೆ ಕಥೆನೇ ಮುಗೀತು. ಬಾಯಿಯಿಂದ ಎಳೆಯೋದಕ್ಕೆ ಪ್ರಾರಂಭಿಸುತ್ತವೆ.ಅಷ್ಟಕ್ಕೂ ನಾಯಿಗಳ ಈ ವರ್ತನೆಗೆ ಕಾರಣವೇನು? ಇದಕ್ಕೆ ಮನುಷ್ಯರಾರು ಕಾರಣ ಅಲ್ಲ. ವಾಹನದ ಟೈರ್ಗಳನ್ನು ಹಿಡಿಯಲು ನಾಯಿಗಳು ಓಡಿ ಬರುತ್ತವೆ. ವಾಹನಗಳ ಟೈರ್ ವಾಸನೆಯಿಂದ ನಾಯಿಗಳು ಹಿಂಬಾಲಿಸುತ್ತವೆ ಅನ್ನೊದು ನಿಮ್ಗೆ ಗೊತ್ತಾ? ನಾಯಿಗಳ ವಾಸನೆಯನ್ನು ಬಹಳ ಬೇಗನೆ ಹಿಡಿಯುತ್ತವೆ.
ನಾಯಿಗಳು ತಮ್ಮ ವಾಸನೆಯನ್ನು ಇತರೆ ನಾಯಿಗಳಿಗೆ ರವಾನೆ ಮಾಡೋ ಉದ್ದೇಶದಿಂದ ವಿದ್ಯುತ್ ಕಂಬ ಅಥವಾ ವಾಹನಗಳ ಟೈರ್ ಮೇಲೆ ಮೂತ್ರ ಮಾಡುತ್ತವೆ. ರಾತ್ರಿ ವಾಹನಗಳು ಹೋಗುತ್ತಿರುವಾಗ ನಿಮ್ಮ ಟೈರ್ ಮೇಲಿರುವ ಬೇರೆ ನಾಯಿಯ ಮೂತ್ರದ ವಾಸನೆ ರಸ್ತೆಯಲ್ಲಿರುವ ಶ್ವಾನಗಳಿಗೆ ಬರುತ್ತದೆ. ಸಾಮಾನ್ಯವಾಗಿ ನಾಯಿಗಳು ತಮ್ಮ ಸೀಮಿತ ಪ್ರದೇಶಕ್ಕೆ ಬೇರೆಯೊಂದು ನಾಯಿ ಬರಲು ಬಿಡುವುದಿಲ್ಲ. ಹಾಗಾಗಿ ವಾಹನಗಳ ಹಿಂದೆ ನಾಯಿಗಳು ಓಡಿ ಬರುತ್ತವೆ.ತಮ್ಮ ಪ್ರದೇಶದಲ್ಲಿ ಬೇರೆ ನಾಯಿಯ ಮೂತ್ರದ ವಾಸನೆ ಬರುತ್ತಿದ್ದಂತೆ ಅಂತಹ ವಾಹನಗಳನ್ನು ಹಿಂಬಾಲಿಸುತ್ತವೆ.
ನೀವು ಭಯಗೊಂಡು ಗಾಡಿಯ ವೇಗ ಹೆಚ್ಚಿಸಿದ್ರೆ ನಾಯಿಗಳು ಮತ್ತಷ್ಟು ಆಕ್ರಮಣಕಾರಿಯಾಗುತ್ತವೆ ಎಂದು ವಿಜ್ಞಾನ ಹೇಳುತ್ತದೆ.ಕೆಲವು ಸಂದರ್ಭಗಳಲ್ಲಿ ತಮ್ಮ ಜೊತೆಯಲ್ಲಿರೋ ನಾಯಿ ವಾಹನದ ಅಪಘಾತದಲ್ಲಿ ಉಸಿರು ಚೆಲ್ಲಿದ್ರೆ ಅಂತಹ ಗಾಡಿಗಳನ್ನು ನಾಯಿಗಳು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂತಹ ವಾಹನಗಳು ಬಂದರೆ ನಾಯಿಗಳು ಅವುಗಳನ್ನು ಸಹ ಹಿಂಬಾಲಿಸುತ್ತವೆ ಎಂದು ಹೇಳಲಾಗಿದೆ.