ನ್ಯೂಸ್ ನಾಟೌಟ್: ಪರೀಕ್ಷೆ ಅಂದರೆ ಅಲ್ಲಿ ಗಂಭೀರತೆ ಇರುತ್ತೆ.ಯಾರೂ ಅತ್ತ ಸುಳಿಯಬಾರದು ಎನ್ನುವ ನಿಯಮವಿದೆ.ಮಾತ್ರವಲ್ಲ ವಿದ್ಯಾರ್ಥಿಗಳನ್ನು ಪರೀಕ್ಷಿಸಿಯೇ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗುತ್ತೆ.ಆದರೆ ಇಲ್ಲೊಂದು ಕಡೆ ಇದು ಉಲ್ಟಾ ಆಗಿದೆ. ಶೈಕ್ಷಣಿಕ ವರ್ಷ ಮುಗಿಯುತ್ತ ಬಂದರೂ ಮಕ್ಕಳಿಗೆ ಪೂರ್ಣ ಪಾಠ ಮಾಡದ ಶಿಕ್ಷಕರು ವಾರ್ಷಿಕ ಪರೀಕ್ಷೆಯಲ್ಲಿ ತಾವೇ ಎಲ್ಲ ಪ್ರಶ್ನೆಗಳಿಗೆ ಉತ್ತರ ಬರೆಸಿದ್ದಾರೆ. ಜತೆಗೆ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ ಮನೆಗೆ ಕೊಟ್ಟು ನಿಧಾನವಾಗಿ ಉತ್ತರ ಬರೆದುಕೊಂಡು ಬನ್ನಿ ಎಂದು ಹೇಳಿರುವ ಘಟನೆ ಬಗ್ಗೆ ವರದಿಯಾಗಿದೆ.
ಇದರಿಂದ ಕೆರಳಿದ ಪಾಲಕರು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ತಂಡಗ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ತಂಡಗದ ಸ. ಹಿ. ಪ್ರಾ.ಪಾಠಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ 42 ಮಕ್ಕಳು, ನಾಲ್ವರು ಶಿಕ್ಷಕರು ಇದ್ದಾರೆ. ಆದರೆ ಪಠ್ಯದಲ್ಲಿರುವ ಪಾಠಗಳನ್ನು ಪೂರ್ಣ ಮಾಡಿಲ್ಲ ಎಂಬುದು ಪಾಲಕರ ಆರೋಪವಾಗಿದೆ.
ಸೋಮವಾರ ಶಾಲೆಯಲ್ಲಿ ನಾಲ್ಕನೇ ತರಗತಿಯ ಪರೀಕ್ಷೆ ಇತ್ತು.ಹೀಗಾಗಿ ಮಕ್ಕಳು ಆದ ಪಾಠವನ್ನು ಓದಿಕೊಂಡು ಉತ್ತರ ಪತ್ರಿಕೆಯನ್ನು ಕೊಟ್ಟು ಮನೆಯಲ್ಲಿ ಉತ್ತರ ಬರೆದುಕೊಂಡು ಬರಲು ಶಿಕ್ಷಕರು ಮಕ್ಕಳಿಗೆ ಹೇಳಿದ್ದಾರೆ. ಮಕ್ಕಳು ಪ್ರಶ್ನಾವಳಿ ಹಾಳೆಯ ಜತೆ ಉತ್ತರ ಪತ್ರಿಕೆಯನ್ನೂ ಮನೆಗೆ ತಂದಾಗ ಪಾಲಕರು ಇದೇನಿದು ಎಂದು ಬೆಚ್ಚಿ ಬಿದ್ದಿದ್ದಾರೆ. ಇದಲ್ಲದೇ 7ನೇ ತರಗತಿಯ ಪರೀಕ್ಷೆಯೂ ಆರಂಭವಾಗಿತ್ತು. ಅಲ್ಲೂ ಯಥಾಸ್ಥಿತಿ. ಇದರಿಂದ ಕೆರಳಿದ ಗ್ರಾಮಸ್ಥರು ಮತ್ತು ಮಕ್ಕಳ ಪಾಲಕರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಬಿಆರ್ಸಿ ವೀಣಾ, ಮಕ್ಕಳಿಂದ ಮಾಹಿತಿ ಸಂಗ್ರಹಿಸಿದರು. ಜತೆಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವ ಭರವಸೆ ನೀಡಿದರು.