ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನಲ್ಲಿರುವ ತುಳುನಾಡಿನ ಪುರಾಣ ಪ್ರಸಿದ್ಧ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನದ (Pilichamundi Daivasthana) ನಿರ್ಮಾಣ ಹಂತದ ಕಟ್ಟಡವನ್ನು ರಾತ್ರೋರಾತ್ರಿ ಜೆಸಿಬಿ ಮೂಲಕ ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.ಕಿಡಿಗೇಡಿಗಳ ಕೃತ್ಯಕ್ಕೆ ದೈವಸ್ಥಾನದ ನೂತನ ಭಂಡಾರಮನೆ ಸಂಪೂರ್ಣ ಧ್ವಂಸವಾಗಿದೆ.
ದೈವಸ್ಥಾನದ ಆಡಳಿತ ಮಂಡಳಿ ವಿವಾದದ ಸಂಘರ್ಷದಲ್ಲಿ ಕಟ್ಟಡ ಧ್ವಂಸವಾಗಿರುವ ಶಂಕೆ ವ್ಯಕ್ತವಾಗಿದೆ.ಎರಡು ಬಣಗಳ ಗುದ್ದಾಟವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ (Muzrai Department) ಸೇರುವ ಕೊಂಡಾಣ ದೈವಸ್ಥಾನ, ಸದ್ಯ ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಭಂಡಾರಮನೆ ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದೆ. ಭಂಡಾರ ಮನೆಯಲ್ಲಿ ಕ್ಷೇತ್ರದ ದೈವಗಳ 15 ಕೋಟಿ ರೂ. ಮೌಲ್ಯಕ್ಕೂ ಮೀರಿದ ಬೆಲೆಬಾಳುವ ಒಡವೆಗಳಿವೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ತಹಸೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್, ಎಸಿಪಿ ಧನ್ಯಾ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ಪೊಲೀಸರು ಸೇರಿ ಎರಡು ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ.