ನ್ಯೂಸ್ ನಾಟೌಟ್: ಟಾಟಾ ಗ್ರೂಪ್ ಒಡೆತನಕ್ಕೆ ಸೇರಿದ ಏರ್ ಇಂಡಿಯಾಗೆ ವಿಮಾನಯಾನ ನಿಯಂತ್ರಣ ಪ್ರಾಧಿಕಾರ ಡಿಜಿಸಿಎ ಮತ್ತೆ 80 ಲಕ್ಷ ರೂ. ದಂಡ ವಿಧಿಸಿದೆ. ವಿಮಾನದ ಕರ್ತವ್ಯದ ಸಮಯದ ಮಿತಿಗಳು ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದಂತೆ ನಿಯಮಗಳ ಉಲ್ಲಂಘಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.
“ವರದಿಗಳು ಮತ್ತು ಪುರಾವೆಗಳ ವಿಶ್ಲೇಷಣೆಯ ವೇಳೆ ಏರ್ ಇಂಡಿಯಾ ಲಿ. 60 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರೂ ವಿಮಾನ ಸಿಬ್ಬಂದಿಯೊಂದಿಗೆ ಒಟ್ಟಾಗಿ ಕೆಲವು ಸಂದರ್ಭಗಳಲ್ಲಿ ಹಾರಾಟ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಇದು ಏರ್ಕ್ರಾಫ್ಟ್ ರೂಲ್ಸ್ – 1937ರ ನಿಯಮ 28 ‘ಎ’ನ ಉಪ ನಿಯಮ (2)ರ ಉಲ್ಲಂಘನೆಯಾಗಿದೆ,” ಎಂದು ಡಿಜಿಸಿಎ ಹೇಳಿಕೆಯಲ್ಲಿ ತಿಳಿಸಿದೆ.”ವಿಮಾನಯಾನ ಸಂಸ್ಥೆ ಹಲವು ಬಾರಿ ಸಿಬ್ಬಂದಿಗೆ ಸಾಪ್ತಾಹಿಕ ವಿಶ್ರಾಂತಿ, ಸುದೀರ್ಘ ವ್ಯಾಪ್ತಿಯ ವಿಮಾನಯಾನಗಳ ಮೊದಲು ಮತ್ತು ನಂತರ ಸಾಕಷ್ಟು ವಿಶ್ರಾಂತಿ ನೀಡಿಲ್ಲ ಹಾಗೂ ಫ್ಲೈಟ್ ಸಿಬ್ಬಂದಿಗೆ ಲೇಓವರ್ನಲ್ಲಿ ಬೇಕಾದಷ್ಟು ವಿರಾಮವನ್ನು ನೀಡಿಲ್ಲ ಎಂದು ಗೊತ್ತಾಗಿದೆ. ಇದು ಎಫ್ಡಿಟಿಎಲ್ಗೆ ಸಂಬಂಧಿಸಿದ ನಾಗರಿಕ ವಿಮಾನಯಾನ ಅಗತ್ಯತೆಗಳ ಅಸ್ತಿತ್ವದಲ್ಲಿರುವ ನಿಬಂಧನೆಗಳ ಉಲ್ಲಂಘನೆಯಾಗಿದೆ,” ಎಂದು ವಿಮಾನಯಾನ ನಿಯಂತ್ರಣ ಪ್ರಾಧಿಕಾರವು ಹೇಳಿದೆ.
ಸುಳ್ಳು ತರಬೇತಿ ದಾಖಲೆಗಳು, ಏಕಕಾಲಕ್ಕೆ ಎರಡೆರಡು ಕರ್ತವ್ಯ ಇತ್ಯಾದಿಗಳನ್ನು ಪರಿಶೀಲನೆ ವೇಳೆ ಗಮನಿಸಲಾಗಿದೆ ಎಂದು ಸಂಸ್ಥೆಯು ಹೇಳಿದೆ.ಈ ಸಂಬಂಧ ಡಿಜಿಸಿಎ ಮಾರ್ಚ್ 1 ರಂದು ಏರ್ ಇಂಡಿಯಾಗೆ ಶೋಕಾಸ್ ನೋಟಿಸ್ ನೀಡಿತ್ತು. ಇದಕ್ಕೆ “ವಿಮಾನಯಾನ ಸಂಸ್ಥೆ ಸಲ್ಲಿಸಿದ ಅತೃಪ್ತಿಕರ ಪ್ರತಿಕ್ರಿಯೆಗೆ ಅನುಗುಣವಾಗಿ ಸಂಸ್ಥೆಗೆ 80 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ,” ಎಂದು ಸಂಸ್ಥೆಯು ಹೇಳಿದೆ. ಈ ಹಿಂದೆಯೂ ಹಲವು ಭಾರಿ ನಿಯಮ ಉಲ್ಲಂಘನೆಯ ಕಾರಣದಿಂದ ಎರ್ ಇಂಡಿಯಾ ಕೋಟಿಗಟ್ಟಲೆ ದಂಡ ಕಟ್ಟಿದೆ ಎಂದು ವರದಿ ತಿಳಿಸಿದೆ.