ನ್ಯೂಸ್ ನಾಟೌಟ್: ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ವಿರೋಧದಿಂದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಶಿಫ್ಟ್ ಆಗಿರುವ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ನಾಲಿಗೆ ಹರಿಬಿಟ್ಟು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ತಮಿಳುನಾಡಿನವರು ಎಂದು ಹೇಳಿಕೆ ನೀಡಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ, ತಮ್ಮ ಹೇಳಿಕೆ ಹಿಂಪಡೆದು, ಕ್ಷಮೆ ಕೇಳಿದ್ದಾರೆ.
ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ನಲ್ಲಿ, “ನನ್ನ ತಮಿಳು ಸಹೋದರರು ಮತ್ತು ಸಹೋದರಿಯರಿಗೆ, ನನ್ನ ಮಾತುಗಳು ಬೆಳಕು ಚೆಲ್ಲುವ ಉದ್ದೇಶವನ್ನು ಹೊಂದಿದ್ದವು, ನೋವು ಉಂಟುಮಾಡುವುದಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಆದರೂ ನನ್ನ ಹೇಳಿಕೆಗಳು ಕೆಲವರಿಗೆ ನೋವು ತಂದಿದೆ ಎನ್ನುವುದನ್ನು ನೋಡಿದ್ದೇನೆ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದಿದ್ದು, ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಪಟ್ಟಂತೆ ಮಾತ್ರ ನಾನು ಟೀಕೆ ಮಾಡಿದ್ದೇನೆ. ತಮಿಳುನಾಡಿನ ಜನತೆಗೆ ನಾನು ಮನಃಪೂರ್ವಕವಾಗಿ ಕ್ಷಮೆ ಕೇಳುತ್ತೇನೆ. ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ” ಎಂದು ಹೇಳಿದ್ದಾರೆ.