ನ್ಯೂಸ್ ನಾಟೌಟ್: ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯಕೀಯ ಅಧಿವೇಶನ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಮಾರ್ಚ್ 24 ರಂದು ಆಚರಿಸಲಾಗುತ್ತಿರುವ ವಿಶ್ವ ಕ್ಷಯರೋಗ ದಿನದ ಪ್ರಯುಕ್ತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹಲವು ಗಣ್ಯರು ಪಾಲ್ಗೊಂಡು ಕ್ಷಯ ರೋಗ ನಿರ್ಮೂಲನೆ ಬಗ್ಗೆ ತಿಳಿಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಒ.ಲ್.ಇ (ರಿ) ಅಧ್ಯಕ್ಷ ಡಾ| ಕೆ.ವಿ. ಚಿದಾನಂದರು ವಹಿಸಿದ್ದರು. ಬಳಿಕ ಮಾತನಾಡಿದ ಅವರು “ಭವಿಷ್ಯದ ವೈದ್ಯರುಗಳಾದ ನೀವು ಮುಂಬರುವ ದಿನಗಳಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ತಡೆಗಟ್ಟಲು ಲಸಿಕೆ ಅಥವಾ ಔಷಧವನ್ನು ಕಂಡುಹಿಡಿಯಿರಿ” ಎನ್ನುತ್ತಾ ಶುಭ ಹಾರೈಸಿದರು.
ವಿಶೇಷ ಅಹ್ವಾನಿತರಾಗಿ ವೇದಿಕೆಯಲ್ಲಿ ಡಬ್ಯೂ.ಎಚ್.ಒ ಮಂಗಳೂರು ವೈದ್ಯಕೀಯ ಸಲಹೆಗಾರ ಡಾ| ಜೋಸ್ ಥೋಮಸ್,ದಕ್ಷಿಣ ಕನ್ನಡ ಹಾಗೂ ಎನ್ ಟಿ ಇ ಪಿ ವೈದ್ಯಕೀಯ ಅಧಿಕಾರಿಯಾದ ಡಾ| ನಿಹಾರಿಕ ಭಾಗವಹಿಸಿದ್ದರು.ಬಳಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಪನ್ಮೂಲ ವ್ಯಕ್ತಿಗಳಿಂದ ಕ್ಷಯರೋಗದ ಕುರಿತಾಗಿ ಹಲವಾರು ಪ್ರಮುಖ ವಿಷಯಗಳ ಬಗ್ಗೆ ತಿಳಿಸಿಕೊಡಲಾಯಿತು.
ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರೆಸ್ಪಿರೇಟರಿ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್ ಟಿ ಇ ಪಿ ಕೋ-ಆರ್ಡಿನೇಟರ್ ಡಾ| ನಂದಕಿಶೋರ್ ಕೆ.ಎಸ್. ಮಾರ್ಚ್ 24 ರಂದು ವಿಶ್ವ ಕ್ಷಯರೋಗ ದಿನವನ್ನಾಗಿ ಆಚರಿಸಲು ಕಾರಣ ಹಾಗೂ ಕ್ಷಯರೋಗ ಪತ್ತೆ ಹಚ್ಚುವ ವಿಧಾನಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ರೆಸ್ಪಿರೇಟರಿ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಎನ್ ಟಿ ಇ ಪಿ ನೋಡಲ್ ಆಫೀಸರ್ ಡಾ| ಪ್ರೀತಿ ರಾಜ್ ಬಲ್ಲಾಳ್ ಮಾತನಾಡಿ ಎನ್ಟಿಇಪಿಯ ಹೊಸ ಯೋಜನೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ರೆಸ್ಪಿರೇಟರಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಅನಿರುದ್ಧ್ ಗಣ್ಯರನ್ನು ಹೂಗುಚ್ಛ ನೀಡುವುದರೊಂದಿಗೆ ವೇದಿಕೆಗೆ ಆಹ್ವಾನಿಸಿದರು. ನೆರೆದಿರುವ ಗಣ್ಯರು ತಮ್ಮ ದಿವ್ಯ ಹಸ್ತದಿಂದ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ಡಾ| ನೀಲಾಂಬಿಕೈ ನಟರಾಜನ್ ಸ್ವಾಗತ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಶುಭ ಕೋರಿದರು.ಕಾರ್ಯಕ್ರಮದಲ್ಲಿ ಪ್ರಮಾಣಪತ್ರ ವಿತರಿಸಲಾಯಿತು.ಕಾಲೇಜಿನ ವಿದ್ಯಾರ್ಥಿ ವಿಘ್ನೇಶ್ ಪ್ರಾರ್ಥಿಸಿದರು.ಆಸ್ಪತ್ರೆಯ ಇತರ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಆಸ್ಪತ್ರೆಯ ಸಿಬ್ಬಂದಿ ಪಾಲ್ಗೊಂಡಿದ್ದರು.