ನ್ಯೂಸ್ ನಾಟೌಟ್ : ಕಾಡು ಪ್ರಾಣಿಗಳು ನಾಡಿನತ್ತ ಹೆಜ್ಜೆ ಇಡುತ್ತಿವೆ.ಮನುಷ್ಯನ ದುರಾಸೆಗಾಗಿ ಕಾಡು ಪ್ರದೇಶಗಳು ನಾಶಗೊಂಡಿರುವುದರ ಪರಿಣಾಮವೋ ಏನೋ..ಕಾಡು ಪ್ರಾಣಿಗಳು ಕೂಡ ಮನುಷ್ಯರು ವಾಸ ಮಾಡುವಲ್ಲಿಗೆ ಮೆಲ್ಲಗೆ ಹೆಜ್ಜೆ ಇಡಲಾರಂಭಿಸಿವೆ.ಅಂತೆಯೇ ಕಡಬ, ಸುಳ್ಯ, ಮಡಿಕೇರಿ ಭಾಗದಲ್ಲಿ ಹೆಚ್ಚಾಗಿ ಚಿರತೆ ಹಾಗೂ ಕಾಡಾನೆಗಳ ಅಟ್ಟಹಾಸ ಜೋರಾಗಿದೆ.ಇದೀಗ ಹಗಲಿನಲ್ಲಿಯೇ ಶಾಲಾ ಸಮೀಪದಲ್ಲಿಯೇ ಕಾಡು ಪ್ರಾಣಿಗಳು ಸಂಚರಿಸುತ್ತಿದ್ದು,ಸ್ಥಳೀಯರ ತಲೆನೋವಿಗೆ ಕಾರಣವಾಗಿದೆ.
ಹೌದು, ಇದೀಗ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಐನೆಕಿದು ಶಾಲೆ ಬಳಿ ಒಂಟಿ ಸಲಗವೊಂದು ಶಾಲೆ ಬಳಿಯಲ್ಲೇ ರಸ್ತೆ ದಾಟಿ ಸ್ಥಳೀಯರು ಆತಂಕಗೊಳ್ಳುವಂತೆ ಮಾಡಿದೆ.ಐನೆಕಿದು ಕಡೆಯಿಂದ ಕೋಟೆಗೆ ಸಂಪರ್ಕಿಸುವ ರಸ್ತೆಯನ್ನು ನಿನ್ನೆ(೦6.೦3) ಸಂಜೆ ಸುಮಾರು 6 ಗಂಟೆಯೆ ವೇಳೆಗೆ ಈ ಘಟನೆ ಸಂಭವಿಸಿದ್ದು, ರಸ್ತೆಯಲ್ಲಿ ಸಂಚರಿಸುವವರೊಬ್ಬರು ಕಾಡಾನೆ ದಾಟುವುದನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿರುವ ವಿಡಿಯೋ ವೈರಲ್ ಆಗುತ್ತಿದೆ.ಆದರೆ ಸಂಜೆ ೬ ಗಂಟೆ ಆಗಿರೋದ್ರಿಂದ ಶಾಲಾ ಮಕ್ಕಳು ಶಾಲೆ ಮುಗಿಸಿ ಮನೆ ಕಡೆ ತೆರಳಿದ್ದರು.ಆದರೆ ಶಾಲಾ ಮಕ್ಕಳು ಶಾಲೆಯ ಸುತ್ತ ಮುತ್ತ ಓಡಾಡುತ್ತಿರುವ ಸಂದರ್ಭದಲ್ಲಿ ಕಾಡಾನೆಗಳು ಈ ರೀತಿ ಸಂಚಾರ ಮಾಡಿದ್ರೆ ಹೇಗೆ ಎನ್ನುವ ಪ್ರಶ್ನೆ ಸ್ಥಳೀಯರಲ್ಲಿ ಎದ್ದಿದೆ. ಈ ಹಿನ್ನಲೆಯಲ್ಲಿ ಈ ಭಾಗದ ಜನತೆ ಭಯಭೀತರಾಗಿದ್ದು, ಕೂಡಲೇ ಅರಣ್ಯ ಇಲಾಖೆ ಕ್ರಮಕೈಗೊಳ್ಳುವಂತೆಯೂ ಆಗ್ರಹಿಸಿದ್ದಾರೆ.