ನ್ಯೂಸ್ ನಾಟೌಟ್: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ತನಿಖೆ ಚುರುಕುಗೊಂಡಿದ್ದು, ಇದೇ ವೇಳೆ ಸಿಎಂ ಸಿದ್ದರಾಮಯ್ಯ ಘಟನೆಯಲ್ಲಿ ಗಾಯಗೊಂಡಿದ್ದ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಎಚ್ಎಎಲ್ನ ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ, ಗಾಯಾಳುಗಳ ಬಗ್ಗೆ ಆಸ್ಪತ್ರೆ ವೈದ್ಯರಿಂದಮಾಹಿತಿ ಪಡೆದಿದ್ದು, ಎಲ್ಲಾ ಗಾಯಾಳುಗಳ ಚಿಕಿತ್ಸಾ ವೆಚ್ಚ ಸರ್ಕಾರವೇ ಭರಿಸಲಿದೆ ಎಂದಿದ್ದಾರೆ.
ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಫಾರೂಕ್, ದಿಪಾಂಶು, ಸ್ವರ್ಣಾಂಭಗೆ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚು ಗಾಯಗೊಂಡಿರುವ ಸ್ವರ್ಣಾಂಭಗೆ ನಿನ್ನೆ ರಾತ್ರಿ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಐದು ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಬ್ರೂಕ್ಫೀಲ್ಡ್ ಆಸ್ಪತ್ರೆಯ ಎಂಡಿ ಡಾ. ಪ್ರದೀಪ್ ಸಿಎಂಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಘಟನಾ ಸ್ಥಳದ ಪರಿಶೀಲನೆ ನಡೆಸಿದ್ದು, ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡಲು ಹೇಳಿದ್ದೇನೆ. ಅವರು ಸದ್ಯ ಚೇತರಿಕೆ ಆಗ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯ ಎಲ್ಲಾ ಖರ್ಚುಗಳನ್ನು ಸರ್ಕಾರ ನೋಡಿಕೊಳ್ಳುತ್ತೆ. ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವಿಶೇಷ ತಂಡವನ್ನು ತನಿಖೆಗೆ ರಚನೆ ಮಾಡಿದ್ದೇವೆ ಎಂದಿದ್ದಾರೆ.