ನ್ಯೂಸ್ ನಾಟೌಟ್: ಮಂತ್ರಾಲಯದಲ್ಲಿರುವ ಜಗ್ಗೇಶ್ ಇಂದು(ಮಾ.17) ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದಿದ್ದ ನಟ ಜಗ್ಗೇಶ್. ಈ ವೇಳೆ ನಾನು ಸಿನಿಮಾ ರಂಗದಲ್ಲಿ ಬೆಳೆಯಲು ಸಹಕರಿಸಿದ ಮಹಾ ಜನತೆಗೆ ಜಗ್ಗೇಶ್ ಧನ್ಯವಾದ ತಿಳಿಸಿದ್ದಾರೆ. ನನ್ನ ಬೆಳವಣಿಗೆಗೆ ಮುಖ್ಯ ಕಾರಣ ನನ್ನ ಗುರುಗಳು ರಾಘವೇಂದ್ರ ಸ್ವಾಮಿಗಳು ಎಂದು ಜಗ್ಗೇಶ್ ಹೇಳಿದ್ದಾರೆ.
ಮುಖ್ಯ ವಿಚಾರಕ್ಕೆ ಬರುತ್ತೇನೆ ಎಂದ ಜಗ್ಗೇಶ್, ನಾನು ನೇರವಾಗಿ ಮಾತಾಡುವ ಮನುಷ್ಯ, ಹಳ್ಳಿಯ ಸೊಗಡಿನವನು, ನನ್ನ ಮಾತುಗಳಲ್ಲಿ ಹಳ್ಳಿ ಪದಗಳು ಬಂದು ಬಿಡುತ್ತವೆ. ನಾನು ಎಂದಿಗೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ವರ್ತೂರ್ ಸಂತೋಷ ಬಗ್ಗೆ ಆಗಿದ್ದ ವಿವಾದದ ಬಗ್ಗೆ ಹೇಳಿದ್ದಾರೆ. ಮಾತು ಮುಂದುವರಿಸಿದ ಜಗ್ಗೇಶ್, ಮೈಕ್ ಹಿಡಿದ ಮಾತಾಡುವಾಗ ನನ್ನ ಮಾತಿನಿಂದ ಯಾರಿಗಾದ್ರೂ ಬೇಜಾರಾಗಿದ್ದರೆ ಕ್ಷಮಿಸಿಬಿಡಿ. ನಿಮ್ಮ ತಂದೆಯ ವಯಸ್ಸಿನವನು ಅಂದುಕೊಂಡು ಕ್ಷಮಿಸಿ ಎಂದು ಹೇಳಿದ್ರು.
ಸಿನಿಮಾದ ಪ್ರಚಾರದ ವೇಳೆ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ, ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಕಿತ್ತೋದ್ ನನ್ ಮಗ ಎಂಬ ಪದ ಬಳಸಿದ್ರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಜಗ್ಗೇಶ್ ವರ್ತೂರು ಸಂತೋಷ್ ಹೆಸರು ಹೇಳದೆ ಕ್ಷಮೆ ಕೇಳಿದ್ದಾರೆ. ಇದೇ ವೇಳೆ ಸಿನಿಮಾ ವಿಚಾರವಾಗಿಯೂ ಮಾತಾಡಿದ ಜಗ್ಗೇಶ್, ಇತ್ತೀಚೆಗೆ ನಾನು ಒಂದು ಸಿನಿಮಾ ಮಾಡಿದ್ದೆ. ಸಿನಿಮಾ ನೋಡಿದ ನಿಮಗೆ ಬೇಸರವಾಗಿದೆ. ನನ್ನ ಮೇಲೆ ಬೇಸರ ಮಾಡಿಕೊಳ್ಳಬೇಡಿ. ಅದು ನನ್ನ ಸಿನಿಮಾ ಅಲ್ಲ, ನಿರ್ದೇಶಕನನ್ನು ನಂಬಿ ಹೋಗಿದ್ದೆ.
ಆ ನಿರ್ದೇಶಕ ತನ್ನ ಆಸೆಗೆ ತಕ್ಕಂತೆ ಕರ್ತವ್ಯ ನಿರ್ವಹಿಸಿದ್ದರು. ಆ ಸಿನಿಮಾದಿಂದ ಅಕಸ್ಮಾತ್ ಬೇಸರವಾಗಿದ್ದರೆ ಕ್ಷಮೆ ಇರಲಿ. ಯಾರನ್ನು ದೂಷಿಸುವುದಿಲ್ಲ ಎಂದ್ರು. ನಾನು ಪ್ರೀಮಿಯರ್ ಪದ್ಮಿನಿ ಎಂಬ ಒಳ್ಳೆಯ ಸಿನಿಮಾ ಕೊಟ್ಟಿದ್ದೀನಿ, ‘8 ಎಂಎಂ, ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾ ಕೊಟ್ಟಿದ್ದೀನಿ. ಈ ಒಂದು ಸಿನಿಮಾದಿಂದ ನನ್ನನ್ನು ದೂರ ಮಾಡ್ಬೇಡಿ. ನನ್ನ ಸಿನಿ ಕೆರಿಯರ್ ನಲ್ಲಿ ಲೋಪದೋಷಗಳಾಗಿದ್ದರೆ ಕ್ಷಮೆ ಇರಲಿ. ರಾಯರ ಸನ್ನಿಧಿಯಲ್ಲಿ ನಿಂತು, ಮನಸ್ಸಿನಲ್ಲಿ ಇದ್ದ ವಿಷಯಗಳನ್ನು ಹೇಳಿಕೊಂಡಿದ್ದೇನೆ. ಯಾವುದೇ ವಿಚಾರಕ್ಕೂ ನನ್ನನ್ನು ದೂಷಿಸಬೇಡಿ. ತಪ್ಪಾಗಿದ್ದರೆ ಕ್ಷಮಿಸಿ ಬಿಡಿ ಎಂದು ನಟ ಜಗ್ಗೇಶ್ ಮನವಿ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.