ನ್ಯೂಸ್ ನಾಟೌಟ್: ಇದು ಇತಿಹಾಸದಲ್ಲಿಯೇ ಮೊದಲ ಪ್ರಕರಣವಾಗಿರಲಿದ್ದು, ಕೇರಳ ಸರ್ಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ವಿರುದ್ದ ಸರ್ವೋಚ್ಚ ನ್ಯಾಯಾಲದ ಮೊರೆ ಹೋಗಿದೆ ಎಂದು ವರದಿ ತಿಳಿಸಿದೆ.
ಕಳೆದ ನವೆಂಬರ್ ತಿಂಗಳಲ್ಲಿ ರಾಜ್ಯಪಾಲರು, ಮಸೂದೆಗಳನ್ನು ಆಂಗೀಕರಿಸದೇ ಬಾಕಿಯಿಟ್ಟು, ಸರ್ಕಾರದ ವಿರುದ್ದ ಪದೇಪದೇ ಗದಾಪ್ರಹಾರ ನಡೆಸುತ್ತಿದ್ದಾರೆಂದು ಕೇರಳ ಸರ್ಕಾರ, ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಈಗ, ಅದೇ ರೀತಿ ರಾಷ್ಟ್ರಪತಿಗಳ ವಿರುದ್ದ ಕೇರಳ ಸರ್ಕಾರ ಸುಪ್ರೀಂ ಮೆಟ್ಟಲೇರಿದೆ. ಇತ್ತೀಚೆಗೆ ಕೇರಳದ ಪಿಣರಾಯಿ ವಿಜಯನ್ ಸರ್ಕಾರ, ವಿಧಾನಸಭೆಯಲ್ಲಿ ನಾಲ್ಕು ಮಸೂದೆಗಳನ್ನು ಮಂಡಿಸಿ, ಆಂಗೀಕರಿಸಿ ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ಇದುವರೆಗೂ ರಾಷ್ಟ್ರಪತಿಗಳಿಂದ ಅಂಕಿತ ಬಿದ್ದಿರಲಿಲ್ಲ.
ಇದರಿಂದಾಗಿ, ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮಸೂದೆ ತ್ವರಿತ ವಿಲೇವಾರಿಗೆ ಅರ್ಜಿ ಸಲ್ಲಿಸಿದೆ. ಕೇರಳ ಸರ್ಕಾದ ಪರವಾಗಿ ಹಿರಿಯ ವಕೀಲ ಸಿ.ಕೆ.ಶಶಿ ವಾದ ಮಂಡಿಸಲಿದ್ದಾರೆ. ಕೇರಳ ಸರ್ಕಾರ, ರಾಷ್ಟ್ರಪತಿಯವರ ಕಾರ್ಯದರ್ಶಿ, ಕೇರಳದ ರಾಜ್ಯಪಾಲ ಆಸಿಫ್ ಮೊಹಮ್ಮದ್ ಖಾನ್, ರಾಜ್ಯಪಾಲರ ಕಾರ್ಯದರ್ಶಿ ಮತ್ತು ಕೇಂದ್ರ ಸರ್ಕಾರವನ್ನು ಪ್ರತಿವಾದಿಗಳು ಎಂದು ಅರ್ಜಿಯಲ್ಲಿ ಹೆಸರಿಸಲಾಗಿದೆ. ವಿಶ್ವವಿದ್ಯಾಲಯ ಕಾನೂನುಗಳ ತಿದ್ದುಪಡಿ ಮಸೂದೆ – 2021, 2022, ಕೇರಳ ಸಹಕಾರ ಸಂಘಗಳ ತಿದ್ದುಪಡಿ ಮಸೂದೆ – 2022 ಸೇರಿದಂತೆ ಹಲವು ಮಸೂದೆಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು. ಆದರೆ, ನಿರ್ದಿಷ್ಟವಾದ ಕಾರಣವನ್ನೂ ನೀಡದೇ, ಸಹಿಯೂ ಹಾಕದೇ ಇರುವುದು ಅಸಾಂವಿಧಾನಿಕ ಎಂದು ತೀರ್ಪು ನೀಡುವಂತೆ ಕೇರಳ ಸರ್ಕಾರ, ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದೆ ಎನ್ನಲಾಗಿದೆ.