ನ್ಯೂಸ್ ನಾಟೌಟ್: ಲಿವ್ ಇನ್ ರಿಲೇಶನ್ನಲ್ಲಿದ್ದ ವ್ಯಕ್ತಿಯನ್ನು ಮಹಿಳೆ ಇರಿದು ಕೊಂದ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದಿದೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ಸಾರ್ಥಕ್ ದಾಸ್ ಎಂದು ಗುರುತಿಸಲಾಗಿದ್ದು, ವೃತ್ತಿಪರ ಛಾಯಾಗ್ರಾಹಕನಾಗಿದ್ದ ಸಾರ್ಥಕ್ ದಾಸ್ ಆರೋಪಿ ಮಹಿಳೆಯೊಂದಿಗೆ ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದ ಎನ್ನಲಾಗಿದೆ.
ಆತನನ್ನು ಕೊಲೆಗೈದ ಮಹಿಳೆಯನ್ನು ಸಂಹತಿ ಪಾಲ್ ಎಂದು ಗುರುತಿಸಲಾಗಿದ್ದು, ಈಕೆ ವೃತ್ತಿಪರ ಮೇಕಪ್ ಕಲಾವಿದೆಯಾಗಿದ್ದಾಳೆ. ಈ ಮೊದಲು ವಿವಾಹಬವಾಗಿದ್ದ ಮಹಿಳೆಗೆ ಒಬ್ಬ ಚಿಕ್ಕ ಮಗನಿದ್ದಾನೆ. ಗಂಡನಿಂದ ವಿಚ್ಛೇದನ ಪಡೆದ ಬಳಿಕ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಕೊಲೆಗೈದ ಮಹಿಳೆ ಸಂಹತಿ ಪೌಲ್ ತಾನು ತನ್ನ ಲಿವ್ ಇನ್ ಸಂಗಾತಿಯನ್ನು ಕೊಲೆಗೈಯುವ ಮೊದಲು ಸಾರ್ಥಕ್ ದಾಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಸಂಹತಿ ಮತ್ತು ಆಕೆಯ ಮಗನ ಜೊತೆಗಿನ ಫೋಟೋ ಹಾಕಿ ಬೆಟರ್ ಹಾಫ್, ಲವ್ ಆಫ್ ಮೈ ಲೈಫ್ ಎಂದು ಪೋಸ್ಟ್ ಮಾಡಿದ್ದರು.
ಆ ಪೋಸ್ಟ್ ಹಾಕಿದ ಕೆಲವೇ ಗಂಟೆಗಳಲ್ಲಿ ಸಾರ್ಥಕ್ ದಾಸ್ನ ಕೊಲೆಯಾಗಿದೆ ಎನ್ನಲಾಗಿದೆ. ಸಾರ್ಥಕ್ ದಾಸ್ ಮತ್ತು ಸಂಹತಿ ಪಾಲ್, ಇಬ್ಬರೂ 30 ರ ಹರೆಯದವರಾಗಿದ್ದು, ಕಳೆದ ಕೆಲವು ದಿನಗಳಿಂದ ತಮ್ಮ ಸಂಬಂಧದಲ್ಲಿ ಇಬ್ಬರಿಗೂ ಹೊಂದಾಣಿಕೆ ಆಗುತ್ತಿರಲಿಲ್ಲ. ಹೀಗಾಗಿ ಪದೇ ಪದೇ ಜಗಳಗಳು ಆಗುತ್ತಿತ್ತು ಎಂದು ತಿಳಿದು ಬಂದಿದೆ. ತನ್ನ ಲಿವ್ ಇನ್ ಸಂಗಾತಿ ಸಾರ್ಥಕ್ ದಾಸ್ನನ್ನು ಕೊಲೆಗೈದ ಬಳಿಕ ತಾನೇ ಅಪರಾಧದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ.
ಸಂಹತಿ ಪೌಲ್ ಕರೆ ಸ್ವೀಕರಿಸಿದ ಪೊಲೀಸರ ತಂಡ ಡುಮ್ಡಮ್ ಪ್ರದೇಶದ ಪೌಲ್ ಅವರ ಅಪಾರ್ಟ್ಮೆಂಟ್ ಅನ್ನು ತಲುಪಿ ಪರಿಶೀಲನೆ ನಡೆಸಿದೆ. ಈ ವೇಳೆ ಸಾರ್ಥಕ್ ದಾಸ್ ದೇಹದ ಮೇಲೆ ಹಲವಾರು ಇರಿತದ ಗುರುತುಗಳೊಂದಿಗೆ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಪೊಲೀಸರು ಗಮನಿಸಿದ್ದಾರೆ. ನಂತರ ಸಾರ್ಥಕ್ ದಾಸ್ನನ್ನು ಪೊಲೀಸರು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆ ಆರೋಪದ ಮೇಲೆ ಆಕೆಯನ್ನು ಬಂಧಿಸಿದ್ದು, ತನಿಖೆಯ ಬಳಿಕವಷ್ಟೇ ನೈಜ ಕಾರಣ ತಿಳಿಯಬೇಕಿದೆ.