ನ್ಯೂಸ್ ನಾಟೌಟ್: ವಿಧಾನಸೌಧದಲ್ಲಿ’ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಆರೋಪದ ವಿಡಿಯೋದ ಎಫ್ಎಸ್ಎಲ್ ವರದಿ ಗುರುವಾರ(ಫೆ.29) ಪೊಲೀಸರ ಕೈ ಸಿಕ್ಕಿದೆ. ಇದರ ಬೆನ್ನಲ್ಲೇ ಪೊಲೀಸರು ವಿಡಿಯೋದಲ್ಲಿದ್ದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ವಿವಾದಿತ ವಿಡಿಯೋದ ಎಫ್ಎಸ್ಎಲ್ ವರದಿ ಸತ್ಯಾಂಶವನ್ನು ಶುಕ್ರವಾರ(ಮಾ.01) ಅಧಿಕೃತವಾಗಿ ಖಚಿತಪಡಿಸಲು ನಗರ ಕಮಿಷನರೇಟ್ ವಿಭಾಗ ನಿರ್ಧರಿಸಿದೆ ಎನ್ನಲಾಗಿದ್ದು, ಹೀಗಾಗಿ, ವಿವಾದಿತ ಘೋಷಣೆ ತನಿಖೆ ಮಹತ್ವದ ತಿರುವು ಪಡೆಯುವ ಸಾಧ್ಯತೆಗಳು ಹೆಚ್ಚಾಗಿದೆ. ಫೆ.27ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ನಾಸೀರ್ ಹುಸೇನ್ ಜಯ ಗಳಿಸಿದ್ದರು.
ಇವರ ವಿಜಯೋತ್ಸವದ ವೇಳೆ ಅವರ ಬೆಂಬಲಿಗರು ಘೋಷಣೆ ಕೂಗುವಾಗ ‘ನಾಸೀರ್ ಸಾರ್ ಜಿಂದಾಬಾದ್’ ಮೊಳಗಿಸಿದ್ದರು. ಈ ನಡುವೆ ದುಷ್ಕರ್ಮಿಯೊಬ್ಬ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದ ಆರೋಪ ಕೇಳಿಬಂದಿತ್ತು. ಎಫ್ ಎಸ್ಎಲ್ ವರದಿ ಬೆನ್ನಲ್ಲೇ ಅಲರ್ಟ್ ಆದ ವಿಶೇಷ ತನಿಖಾ ತಂಡಗಳು ಹಾವೇರಿಯಲ್ಲಿ ಒಬ್ಬನನ್ನು ವಶಕ್ಕೆ ಪಡೆದಿವೆ. ಕೇಂದ್ರ ವಿಭಾಗದ ಎಸಿಪಿಯೊಬ್ಬರ ಮುಂದೆ ಇನ್ನೊಬ್ಬ ಆರೋಪಿ ಶರಣಾಗಿದ್ದಾನೆ.
ಬೇರೆ ಜಿಲ್ಲೆಗಳ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಶುಕ್ರವಾರ ಮೂವರನ್ನೂ ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ನಾಲ್ವರು ಮಾತ್ರವಲ್ಲದೆ ರಾಜ್ಯಸಭೆಗೆ ಆಯ್ಕೆಯಾದ ಸಂಸದರ ಜತೆ ಅಂದು ವಿಧಾನಸೌಧಕ್ಕೆ ಪ್ರವೇಶಿಸಿದ್ದ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಹಲವರು ಘೋಷಣೆ ಕುರಿತು ಭಿನ್ನ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಕೂಲಂಕಷವಾಗಿ ತನಿಖೆ ನಡೆಸಿ ನಾಲ್ವರ ಜತೆ ನಿಕಟ ಸಂಪರ್ಕ ಹೊಂದಿದವರನ್ನೂ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.