ನ್ಯೂಸ್ ನಾಟೌಟ್: ವಿಧಾನಸೌಧದ ಒಳಗೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯ (FSL) ಪರೀಕ್ಷೆಯಲ್ಲಿ ದೃಢವಾಗಿದೆ ಎಂದು ಬಿಜೆಪಿ ಹೇಳಿದೆ. ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ “ವಿಧಾನಸೌಧದ ಒಳಗೆ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿದೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ FSL ವರದಿಯಲ್ಲಿ ಬಟಾ ಬಯಲಾಗಿದೆ” ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ. “ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ.
ರಾಷ್ಟ್ರ ವಿರೋಧಿ ಧೋರಣೆಯ ಕಾಂಗ್ರೆಸ್ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ತಮ್ಮ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು” ಎಂದು ಆಗ್ರಹಿಸಿದೆ. ಮಂಗಳವಾರ (ಫೆ.27) ರಂದು ರಾಜ್ಯಸಭೆ ಚುನಾವಣೆ ನಡೆಯಿತು.
ಈ ಚುನಾವಣೆಯಲ್ಲಿ ಕಾಂಗ್ರೆಸ್ನ ಮೂವರು ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ವಿಜಯಶಾಲಿಯಾದರು. ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಅವರ ಬೆಂಬಲಿಗ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸುದ್ದಿ ಸಾಕಷ್ಟು ಚರ್ಚೆಯಾಗಲು ಆರಂಭವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಸತ್ಯಾಸತ್ಯತೆ ತಿಳಿಯಲು ಘೋಷಣೆ ಕೇಳಿ ಬಂದಿದೆ ಎನ್ನಲಾಗಿರುವ ವಿಡಿಯೋ ತುಣಕನ್ನು ಪರೀಕ್ಷಿಸಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದೆ. ಈ ವಿಡಿಯೋ ತುಣುಕು ಎಫ್ಎಸ್ಎಲ್ ಪರೀಕ್ಷೆಗೆ ಒಳಟ್ಟಿದ್ದು, ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ವರದಿಯಲ್ಲಿ ಧೃಡವಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಯಾವುದೆ ವರದಿ, ಹೇಳಿಕೆಯನ್ನು ನೀಡಿಲ್ಲ ಮತ್ತು ಈ ವರದಿಯನ್ನು ಮುಚ್ಚಿಡುವ ಯತ್ನ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.