ನ್ಯೂಸ್ ನಾಟೌಟ್ : ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದರೆ , ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟಿಸಿದೆ.ಈ ಬೆನ್ನಲ್ಲೇ ಇದೀಗ ವಿಧಾನಪರಿಷತ್ತಿನ ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಕೂಡ ಬಿಜೆಪಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜೂನ್ ತಿಂಗಳಲ್ಲಿ ಅವರ ವಿಧಾನಪರಿಷತ್ ಸದಸ್ಯ ಸ್ಥಾನದ ಅವಧಿಯೂ ಮುಕ್ತಾಯಗೊಳ್ಳುತ್ತಿದೆ.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಮೈಸೂರು ಅಥವಾ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗಿತ್ತು.ಆದರೆ ಅವರು ಎರಡೂ ಕ್ಷೇತ್ರಗಳ ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ರಾಜೀನಾಮೆ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿದ್ದ ತೇಜಸ್ವಿನಿ, ಕನಕಪುರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಸೋಲಿಸಿ ಮುನ್ನೆಲೆಗೆ ಬಂದಿದ್ದರು.ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಅವರನ್ನೇ ರಾಜಕೀಯ ಗುರುಗಳೆಂದಿದ್ದ ತೇಜಸ್ವಿನಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರುವಾಗ ಡಿಕೆಶಿ ಸಹೋದರರ ವಿರುದ್ಧ ಕಟು ಶಬ್ದ ಬಳಸಿದ್ದರು. ಈಗ ಮತ್ತೆ ಕಾಂಗ್ರೆಸ್ ಸೇರುವ ಇಂಗಿತವನ್ನು ಆಪ್ತವಲಯದಲ್ಲಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿ.ಎನ್. ಬಚ್ಚೇಗೌಡ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರಿಗೆ ರಾಜೀನಾಮೆ ಪತ್ರ ರವಾನಿ ಸಿದ್ದು, ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ಸ್ವ-ಇಚ್ಛೆಯಿಂದ ರಾಜೀನಾಮೆ ಸಲ್ಲಿಸಿದ್ದೇನೆ ಎಂದಿದ್ದಾರೆ. ಇದನ್ನು ಅಂಗೀಕರಿಸಬೇಕೆಂದೂ ಕೋರಿದ್ದಾರೆ.