ನ್ಯೂಸ್ ನಾಟೌಟ್: ಹುಟ್ಟುಹಬ್ಬ (Birth Day) ಆಚರಣೆಗೆ ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಕೇಕ್ ತಿಂದು 10 ವರ್ಷದ ಬಾಲಕಿ ಕೊನೆಯುಸಿರೆಳೆದ ಘಟನೆ ಪಂಜಾಬ್ನ ಪಟಿಯಾಲದಲ್ಲಿ ನಡೆದಿದೆ. ಕಳೆದ ವಾರ ಪಂಜಾಬ್ನಲ್ಲಿ 10 ವರ್ಷದ ಬಾಲಕಿ ಮಾನ್ವಿ ಹುಟ್ಟುಹಬ್ಬದಂದು ಕೇಕ್ (Cake) ಸೇವಿಸಿ ಕೊನೆಯುಸಿರೆಳೆದಿದ್ದಳು, ಈ ಘಟನೆ ತಡವಾಗಿ ದೃಢಪಟ್ಟಿದೆ. ಆನ್ಲೈನ್ನಲ್ಲಿ(Online) ಆರ್ಡರ್ ಮಾಡಿದ ಕೇಕ್ ಸೇವಿಸಿ ಆಕೆ ಉಸಿರು ಚೆಲ್ಲಿದ್ದಾಳೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
ಕೇಕ್ ತಯಾರಿಸಿದ ಬೇಕರಿ ಮಾಲೀಕನ ಮೇಲೆ ಎಫ್ಐಆರ್ ದಾಖಲಾಗಿದೆ. ದೇಹದ ಪರೀಕ್ಷೆಯನ್ನು ಮಾಡಲಾಗಿದೆ. ಚಾಕಲೇಟ್ ಕೇಕ್ನ ಮಾದರಿಯನ್ನು ಸಹ ಪರೀಕ್ಷೆಗೆ ಕಳುಹಿಸಲಾಗಿದೆ. ನಾವು ವರದಿಗಳಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾನ್ವಿಯ ಹುಟ್ಟುಹಬ್ಬದ ಆಚರಣೆಗೆ ಆನ್ಲೈನ್ನಲ್ಲಿ ಕೇಕ್ ಆರ್ಡರ್ ಮಾಡಲಾಗಿತ್ತು. ಮಾರ್ಚ್ 24 ರಂದು ರಾತ್ರಿ 7 ಗಂಟೆಯ ವೇಳೆ ಮಾನ್ವಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಳು. ಅಂದು ರಾತ್ರಿ 10 ಗಂಟೆಯ ವೇಳೆ ಮಾನ್ವಿಯ ಇಡೀ ಕುಟುಂಬವೇ ಅಸ್ವಸ್ಥಗೊಂಡಿತು.
ಇಬ್ಬರು ಸಹೋದರಿಯರು ಸ್ವಲ್ಪ ಸಮಯದ ನಂತರ ವಾಂತಿ ಮಾಡಲು ಆರಂಭಿಸಿದರು. ರಾತ್ರಿ ಮಾನ್ವಿ ನನಗೆ ಬಹಳ ಬಾಯಾರಿಕೆ ಆಗುತ್ತಿದೆ. ಬಾಯಿ ಒಣಗುತ್ತಿದೆ ಎಂದು ಹೇಳಿ ಅನೇಕ ಬಾರಿ ನೀರು ಕೇಳಿ ಮಲಗುತ್ತಿದ್ದಳು. ಅಸ್ವಸ್ಥಗೊಂಡಿದ್ದ ಮಾನ್ವಿಯ ಆರೋಗ್ಯ ಮರುದಿನ ಬೆಳಗ್ಗೆ ಏರುಪೇರಾಯ್ತು. ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಕೂಡಲೇ ಇಸಿಜಿ ಮಾಡಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾನ್ವಿ ಅಂದೇ ಕೊನೆಯುಸಿರೆಳೆದಿದ್ದಾಳೆ ಎನ್ನಲಾಗಿದೆ.