ನ್ಯೂಸ್ ನಾಟೌಟ್:ಕೊಡಗು ಮತ್ತು ದಕ್ಷಿಣ ಕನ್ನಡದ ಗಡಿಭಾಗದ ಜನತೆ ಮತ್ತೆ ಆತಂಕಕ್ಕೀಡಾದ ಪರಿಸ್ಥಿತಿ ನಿರ್ಮಾಣವಾಗಿದೆ.2018ರ ಫೆಬ್ರವರಿ ತಿಂಗಳಿನಲ್ಲಿ ಸಮೀಪದ ಸಂಪಾಜೆ ಗುಡ್ಡೆಗದ್ದೆಯಲ್ಲಿ ನಕ್ಸಲ್ ತಂಡ ಕಾಣಿಸಿಕೊಂಡು ಅಲ್ಲಿನ ಜನ ಭಯಭೀತರಾಗಿದ್ದರು.ಇದೀಗ ಮತ್ತೆ ಅವರಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ದುಷ್ಕೃತ್ಯವೆಸಗಲು ತಯಾರಿ ಮಾಡಿಕೊಂಡಿರಬಹುದೇ ಎನ್ನುವ ಅನುಮಾನಗಳು ಶುರುವಾಗಿವೆ.
ಮಡಿಕೇರಿ ತಾಲೂಕು ಕಾಲೂರು ಗ್ರಾಮದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಕಾಣಿಸಿಕೊಂಡ ನಕ್ಸಲರು ಕೂಜಿಮಲೆಯ ದಿನಸಿ ಅಂಗಡಿಯೊಂದರಿಂದ ದಿನಸಿ ಸಾಮಾನುಗಳನ್ನು ಖರೀದಿಸಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.ಸುಮಾರು 4 ಸಾವಿರ ರೂ.ಗಳಷ್ಟು ಬೆಲೆಯ ದಿನಸಿಯನ್ನು ಖರೀದಿಸಿದ ಅವರು ,8 ಜನರಿದ್ದರು ಎಂದು ಹೇಳಲಾಗಿದೆ.ಕೊಡಗಿಗೆ ಸೇರಿರುವ ಕೂಜಿಮಲೆಗೆ ಸಮೀಪದಲ್ಲಿ ಸುಳ್ಯ ತಾಲೂಕಿನ ಗುತ್ತಿಗಾರು, ಕೊಲ್ಲಮೊಗರು, ಕಲ್ಮಕಾರು ಗ್ರಾಮಗಳಿವೆ. ಇಲ್ಲಿ ಬಹು ವಿಸ್ತಾರವಾದ ಕೂಜಿಮಲೆ ರಬ್ಬರ್ ಎಸ್ಟೇಟ್ ಇದೆ.ಇದೀಗ 6 ವರ್ಷದ ಬಳಿಕ ಮತ್ತೆ ಕೊಡಗಿನಲ್ಲಿ ಕೆಂಪು ಉಗ್ರರು ಪ್ರತ್ಯಕ್ಷಗೊಂಡಿದ್ದು, ಅಲ್ಲಿನ ಸಾರ್ವಜನಿಕರ ನಿದ್ದೆಗೆಡಿಸಿದೆ. 2012ರಲ್ಲಿ ಇದೇ ಕಾಲೂರು ಗ್ರಾಮದಲ್ಲಿ ನಕ್ಸಲೀಯರು ಕಾಣಿಸಿಕೊಂಡಿದ್ದು, 2018ರಲ್ಲಿ ಸಂಪಾಜೆ ಗುಡ್ಡೆಗದ್ದೆಯಲ್ಲಿ ಒಂದು ತಂಡ ಕಾಣಿಸಿಕೊಂಡಿರುವುದರ ಬಗ್ಗೆ ಭಾರಿ ಸುದ್ದಿಯಾಗಿತ್ತು.
೨೦೨೪ರ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ.ಈ ಹಿನ್ನಲೆಯಲ್ಲಿ ನಕ್ಸಲರು ಆಕ್ಟಿವ್ ಆಗಿದ್ದಾರೆ ಎಂದು ಹೇಳಲಾಗಿದೆ.ಈ ಹಿನ್ನಲೆಯಲ್ಲಿ ಪೊಲೀಸರು ಕೂಡ ಹದ್ದಿನ ಕಣ್ಣಿಟ್ಟಿದ್ದು, ಉಭಯ ಜಿಲ್ಲೆಗಳ ಗಡಿಯಲ್ಲಿ ನಿಗಾ ಇಟ್ಟಿದ್ದಾರೆ. ನಿರ್ದಿಷ್ಟ ಪಕ್ಷದ ಕುರಿತ ಕಾರ್ಯಾಚರಣೆ ನಡೆಸಲು ಈ ಉದ್ದೇಶವನ್ನಿಟ್ಟಿರಬಹುದೆಂಬ ಅನುಮಾನಗಳು ಕೂಡ ದಟ್ಟವಾಗಿ ಕಾಡುತ್ತಿದೆ. ಇಲ್ಲಿ ಓಡಾಡುವ ಅಪರಿಚಿತ ವಾಹನಗಳ ಮೇಲೂ ನಿಗಾ ಇಡಲಾಗಿದ್ದು, ಚುನಾವಣಾ ನೀತಿ ಸಂಹಿತೆಯ ಭಾಗವಾಗಿ ಚೆಕ್ಪೋಸ್ಟ್ಗಳನ್ನೂ ಇದೀಗ ನಿರ್ಮಿಸಲಾಗುತ್ತಿದೆ.