ನ್ಯೂಸ್ ನಾಟೌಟ್: 2013 ರಲ್ಲಿ ತಮಿಳುನಾಡಿನ ಸೇಲಂನಲ್ಲಿ ಹತ್ಯೆಗೀಡಾದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ‘ಆಡಿಟರ್’ ವಿ ರಮೇಶ್ ಅವರನ್ನು ಸ್ಮರಿಸುವಾಗ ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ಕಣ್ಣೀರು ಹಾಕಿದ ಘಟನೆ ಸೇಲಂನಲ್ಲಿ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡುವಾಗ ನಡೆದಿದೆ. “ಇಂದು ನಮ್ಮೊಂದಿಗೆ ಇಲ್ಲ. ರಮೇಶ್ ಪಕ್ಷಕ್ಕಾಗಿ ಹಗಲಿರುಳು ದುಡಿದರು.
ಅವರು ನಮ್ಮ ಪಕ್ಷದ ಸಮರ್ಪಿತ ನಾಯಕರಾಗಿದ್ದರು. ಅವರು ಉತ್ತಮ ವಾಗ್ಮಿ ಮತ್ತು ತುಂಬಾ ಕಠಿಣ ಪರಿಶ್ರಮಿ ಮನುಷ್ಯ. ನಾನು ಅವರಿಗೆ ಗೌರವ ಸಲ್ಲಿಸುತ್ತೇನೆ” ಎಂದು ಹೇಳಿ ನರೇಂದ್ರ ಮೋದಿ ಗದ್ಗದಿತರಾದರು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ‘ಆಡಿಟರ್’ ವಿ. ರಮೇಶ್ (54)ರನ್ನು ಸೇಲಂನ ಅವರ ಮನೆಯಲ್ಲೇ 2013 ರಲ್ಲಿ ಅಪರಿಚಿತ ಗ್ಯಾಂಗ್ ಹತ್ಯೆ ಮಾಡಿತ್ತು ಇದನ್ನು ಭಾಷಣದ ವೇಳೆ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ.
ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಕೆ.ಎನ್. ಲಕ್ಷ್ಮಣನ್ ಅವರನ್ನೂ ಕುಡ ಸ್ಮರಿಸಿದ ಪ್ರಧಾನಿ, ತುರ್ತುಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ, ರಾಜ್ಯದಲ್ಲಿ ಬಿಜೆಪಿಯ ವಿಸ್ತರಣೆಯಲ್ಲಿ ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ಅವರು ರಾಜ್ಯದಲ್ಲಿ ಅನೇಕ ಶಾಲೆಗಳನ್ನು ಸಹ ಪ್ರಾರಂಭಿಸಿದರು ಎಂದು ಸ್ಮರಿಸಿದ್ದಾರೆ. ಕೆ.ಎನ್. ಲಕ್ಷ್ಮಣನ್ ಜೂನ್ 2020 ರಲ್ಲಿ ಸೇಲಂನ ಸೆವ್ವೈಪೆಟ್ಟೈನಲ್ಲಿರುವ ತಮ್ಮ ನಿವಾಸದಲ್ಲಿ ವೃದ್ಧಾಪ್ಯ ಸಮಸ್ಯೆಗಳಿಂದ ನಿಧನರಾಗಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ‘ಶಕ್ತಿ’ ಹೇಳಿಕೆಯ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಯಾರು ಶಕ್ತಿಯನ್ನು ನಾಶ ಮಾಡಲು ಹೋಗುತ್ತಾರೋ ಅವರೇ ನಾಶವಾಗಿ ಬಿಡುತ್ತಾರೆ ’ ಎಂದು ಅಬ್ಬರಿಸಿದ್ದಾರೆ. ಅಲ್ಲದೆ ಇಂಡಿಯಾ ಮೈತ್ರಿಕೂಟ ಕೇವಲ ಹಿಂದೂಧರ್ಮವನ್ನು ಮಾತ್ರವೇ ಗುರಿ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.