ನ್ಯೂಸ್ ನಾಟೌಟ್ : ಹೆಚ್ಚಾಗಿ ಹಳ್ಳಿ ಕಡೆಗಳಲ್ಲಿ ಮನೆಯಲ್ಲಿ ಉಪ್ಪು, ಸಕ್ಕರೆ ಅಥವಾ ಕಾಫಿಪುಡಿ ಖಾಲಿಯಾಗಿದ್ದರೆ ಪಕ್ಕದ ಮನೆ ಬಾಗಿಲು ತಟ್ಟುತ್ತಾ, ಅವರ ಬಳಿಯಿಂದ ಪಡ್ಕೊಂಡು ನಾಳೆ ಕೊಡ್ತೀನಿ ಎಂದು ಹೇಳೋದು ಸಾಮಾನ್ಯ.ಆದರೆ ಇಲ್ಲೊಬ್ಬ ವ್ಯಕ್ತಿ ಮಧ್ಯರಾತ್ರಿ ಮಹಿಳೆಯರೇ ಇದ್ದ ಮನೆಗೆ ಹೋಗಿ ಕೇಳಿದ್ದೇನು ಗೊತ್ತಾ? ಇದಕ್ಕೆ ಕೋರ್ಟ್ ಹೇಳಿದ್ದೇನು ಗೊತ್ತಾ? ಇಲ್ಲಿದೆ ರಿಪೋರ್ಟ್…
ಹೌದು,ಸಿಐಎಸ್ಎಫ್ನ ಕಾನ್ಸ್ಟೆಬಲ್ ಮನೆಯಲ್ಲಿ ನಿಂಬೆ ಹಣ್ಣು ಖಾಲಿಯಾಗಿತ್ತು.ಇದಕ್ಕಾಗಿ ಆತ ಪಕ್ಕದ ಮನೆಯವರ ಬಾಗಿಲು ತಟ್ಟಿದ್ದ. ಆದರೆ ಆಗ ಮಧ್ಯರಾತ್ರಿಯಾಗಿತ್ತು. ಕಾನ್ಸ್ಟೆಬಲ್ ವರ್ತನೆಯಿಂದ ಸಿಟ್ಟಿಗೆದ್ದ ಪಕ್ಕದ ಮನೆಯವರು ಆತನ ವಿರುದ್ಧ ದೂರು ನೀಡಿದ್ದರು. ಈ ಸಂಬಂಧ ಕಾನ್ಸ್ಟೆಬಲ್ಗೆ ದಂಡ ವಿಧಿಸಲಾಗಿತ್ತು. ಈ ಶಿಕ್ಷೆಯನ್ನು ರದ್ದುಗೊಳಿಸಲು ಬಾಂಬೆ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
“ಮನೆಯಲ್ಲಿ ಗಂಡಸು ಇಲ್ಲ ಹಾಗೂ ತನ್ನ ಆರು ವರ್ಷದ ಮಗಳ ಜತೆ ಒಂಟಿಯಾಗಿ ಮಹಿಳೆ ಇದ್ದಾರೆ ಎನ್ನುವುದು ತಿಳಿದಿದ್ದರೂ, ಅದೂ ಹೊಟ್ಟೆ ಕೆಟ್ಟಿರುವ ‘ವೈದ್ಯಕೀಯ ತುರ್ತು ಪರಿಸ್ಥಿತಿ’ ಎನ್ನಲಾದ ಕ್ಷುಲ್ಲಕ ಕಾರಣಕ್ಕಾಗಿ ನಿಂಬೆ ಹಣ್ಣು ಪಡೆಯಲು ಹೊತ್ತಲ್ಲದ ಹೊತ್ತಿನಲ್ಲಿ ಮನೆ ಬಾಗಿಲು ತಟ್ಟುವುದು ಅಸಂಬದ್ಧ” ಎಂದು ಹೈಕೋರ್ಟ್ ವಿಭಾಗೀಯ ಪೀಠ ಹೇಳಿದೆ.
“ಸಿಐಎಸ್ಎಫ್ ಕಾನ್ಸ್ಟೆಬಲ್ನ ವರ್ತನೆ ಲಜ್ಜೆಗೇಡಿನದು” ಎಂದು ನ್ಯಾಯಮೂರ್ತಿಗಳಾದ ನಿತಿನ್ ಜಾಮದಾರ್ ಮತ್ತು ಎಂಎಂ ಸಥಾಯೆ ಅವರನ್ನು ಒಳಗೊಂಡ ಪೀಠ ಮಾರ್ಚ್ 11ರ ಆದೇಶದಲ್ಲಿ ಹೇಳಿದೆ. ತನ್ನ ಸಹೋದ್ಯೋಗಿಯೇ ಆಗಿರುವ ಮಹಿಳೆಯ ಪತಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವುದು ಆತನಿಗೆ ತಿಳಿದಿತ್ತು ಎಂದು ಹೇಳಿದೆ.
2021ರ ಜುಲೈನಿಂದ 2022ರ ಜೂನ್ ನಡುವೆ ಮೇಲಿನ ಅಧಿಕಾರಿಗಳು ತನ್ನ ಮೇಲೆ ದಂಡ ವಿಧಿಸಿ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸಿ ಸಿಐಎಸ್ಎಫ್ ಕಾನ್ಸ್ಟೆಬಲ್ ಅರವಿಂದ್ ಕುಮಾರ್, ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ.2021ರ ಏಪ್ರಿಲ್ 19ರ ಮಧ್ಯರಾತ್ರಿ ಸುಮಾರಿಗೆ ಅರವಿಂದ್ ಕುಮಾರ್, ತಾನು ವಾಸವಿರುವ ಮಹಡಿಯಲ್ಲಿರುವ ಪಕ್ಕದ ಮನೆಯ ಬಾಗಿಲು ತಟ್ಟಿದ್ದ. ಬಾಗಿಲು ತೆರೆದ ಮಹಿಳೆ, ಆತನನ್ನು ಆ ಹೊತ್ತಿನಲ್ಲಿ ಕಂಡು ಭಯಭೀತರಾಗಿದ್ದರು. ಆಕೆ ಎಚ್ಚರಿಕೆ ನೀಡಿದಾಗ ಕಾನ್ಸ್ಟೆಬಲ್ ಅಲ್ಲಿಂದ ವಾಪಸಾಗಿದ್ದ.ಇದರ ಬಳಿಕ ಅರವಿಂದ್ ಕುಮಾರ್ ವಿರುದ್ಧ ಹಿರಿಯ ಅಧಿಕಾರಿಗೆ ಮಹಿಳೆ ದೂರು ನೀಡಿದ್ದರು. ಇಲಾಖಾ ತನಿಖೆ ಬಳಿಕ ಕುಮಾರ್ ವರ್ತನೆ ವಿರುದ್ಧ ಆರೋಪ ದಾಖಲಾಗಿತ್ತು.
ಅರವಿಂದ್ ನೀಡಿದ ವಿಚಿತ್ರ ಕಾರಣ, ಘಟನೆ ಸುತ್ತಲಿನ ಸನ್ನಿವೇಶಗಳನ್ನು ಪರಿಗಣಿಸಿ ಅದು ಕಿರುಕುಳಕ್ಕೆ ಸಮನಾಗಿದೆ ಎಂದು ತೀರ್ಮಾನಿಸಲಾಗಿತ್ತು. ಜತೆಗೆ ಇದು ಸಿಐಎಸ್ಎಫ್ ವರ್ಚಸ್ಸಿಗೆ ಕಳಂಕ ಉಂಟುಮಾಡುವ ಅಶಿಸ್ತಿನ ಹಾಗೂ ಅನುಚಿತ ನಡವಳಿಕೆಯ ಸಂಕೇತ ಎನ್ನಲಾಗಿತ್ತು. ಘಟನೆಗೂ ಮುಂಚೆ ಆತ ಆಲ್ಕೋಹಾಲ್ ಸೇವನೆ ಮಾಡಿದ್ದು ಸಹ ಕಂಡುಬಂದಿತ್ತು.ಅರವಿಂದ್ ಕುಮಾರ್ಗೆ ಶಿಕ್ಷೆಯಾಗಿ ಮೂರು ವರ್ಷಗಳ ಅವಧಿಗೆ ವೇತನ ಕಡಿತ ಮಾಡಲಾಗಿತ್ತು. ಜತೆಗೆ ಈ ಅವಧಿಯಲ್ಲಿ ಆತನಿಗೆ ಯಾವುದೇ ವೇತನ ಹೆಚ್ಚಳ ನಿರ್ಬಂಧಿಸಲಾಗಿತ್ತು. ತನ್ನ ಆರೋಗ್ಯ ಸರಿ ಇರಲಿಲ್ಲ. ಇದಕ್ಕಾಗಿ ನಿಂಬೆ ಹಣ್ಣು ಕೇಳುವ ಸಲುವಾಗಿಯಷ್ಟೇ ಪಕ್ಕದ ಮನೆಯ ಬಾಗಿಲು ತಟ್ಟಿದ್ದಾಗಿ ಆತ ಹೇಳಿದ್ದ.
“ಸಿಐಎಸ್ಎಫ್ನಂತಹ ಪಡೆಯಲ್ಲಿದ್ದು, ಕುಮಾರ್ ನಡವಳಿಕೆಯು ಹುದ್ದೆಗೆ ಯೋಗ್ಯವಾಗಿಲ್ಲ. ನಾವು ಪರಿಗಣಿಸಿದ ದೃಷ್ಟಿಕೋನದಲ್ಲಿ, ಕುಮಾರ್ ಉದ್ದೇಶವು ಖಂಡಿತವಾಗಿಯೂ ನಂಬಲರ್ಹ ಎನಿಸುತ್ತಿಲ್ಲ ಹಾಗೂ ಆರೋಪಕ್ಕೆ ಪೂರಕವಾಗಿದೆ” ಎಂದು ಕೋರ್ಟ್ ಹೇಳಿದೆ.