ನ್ಯೂಸ್ ನಾಟೌಟ್ : ಐಸ್ಕ್ರೀಂ ವ್ಯಾಪಾರಿ ಶಾನು ಖಾನ್ ಎಂಬವರ ಮೊಬೈಲ್ ಕಳ್ಳತನವಾದಾಗ, ತಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಸುಲಿಗೆಕೋರರ ಜತೆಯೇ ವ್ಯವಹಾರ ಕುದುರಿಸಿದ ಘಟನೆ ನಡೆದಿದೆ. 10 ಸಾವಿರ ರೂಪಾಯಿ ನೀಡಿದಲ್ಲಿ ಮೊಬೈಲ್ ವಾಪಾಸು ಮಾಡುವುದಾಗಿ ಸುಲಿಗೆಕೋರರಿಂದ ಆಶ್ವಾಸನೆ ಸಿಕ್ಕಿತು. ಆದರೆ ಇದಕ್ಕಾಗಿ ನಾಲ್ಕು ಗಂಟೆ ಕಾಲ ಅಲೆದಾಡಿಸಿದರು.
ಖಾನ್ ಪ್ರಯತ್ನ ಕೊನೆಗೂ ಫಲಿಸಿತು. ಹಣ ಪಡೆದು ಮೊಬೈಲ್ ಹಿಂದಿರುಗಿಸಲು ಬಂದ ಕಳ್ಳರನ್ನು ಬಲೆಗೆ ಬೀಳಿಸುವಲ್ಲಿ ಖಾನ್ ಯಶಸ್ವಿಯಾದ್ದಾರೆ ಎನ್ನಲಾಗಿದೆ. ಶುಕ್ರವಾರ(ಮಾ.೯) ಮಯೂರ್ ವಿಹಾರದಲ್ಲಿ. ಆರೋಪಿಗಳನ್ನು ನೋಯ್ಡಾ ಮತ್ತು ಪೂರ್ವದೆಹಲಿಯಲ್ಲಿ ಒಂಬತ್ತು ಪ್ರಕರಣಗಳಲ್ಲಿ ಷಾಮೀಲಾದ ಆರೋಪಿ ಕೃಷ್ಣನ್ ಭಂಡಾರಿ (26) ಹಾಗೂ ಧೀರೇಂದ್ರ (26) ಎಂದು ಗುರುತಿಸಲಾಗಿದೆ.
ಖಾನ್ ಬೆಳಿಗ್ಗೆ 9ರ ಸುಮಾರಿಗೆ ಮಯೂರ್ ವಿಹಾರ್ ಗೆ ಹೋಗುತ್ತಿದ್ದಾಗ ಕೈಯಲ್ಲಿ ಹಿಡಿದಿದ್ದ ಫೋನನ್ನು ಆರೋಪಿಗಳು ಕಿತ್ತುಕೊಂಡಿದ್ದರು. ಸುಲಿಗೆಕೋರರನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಚಾಕು ತೋರಿಸಿ ಬೆದರಿಸಿದ ಕಳ್ಳರು ಪರಾರಿಯಾಗಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ. ಅಲ್ಲಿ ಹಾದುಹೋಗುತ್ತಿದ್ದವರ ಫೋನ್ ನೆರವಿನಿಂದ ತಮ್ಮ ದೂರವಾಣಿ ಸಂಖ್ಯೆಗೆ ಖಾನ್ ಕರೆ ಮಾಡಿದರು.
ಕರೆ ಸ್ವೀಕರಿಸಿದ ಭಂಡಾರಿ, ಹಣ ನೀಡಿದಲ್ಲಿ ಮೊಬೈಲ್ ವಾಪಾಸು ಮಾಡುವುದಾಗಿ ತಿಳಿಸಿದ. ಖಾನ್ ಸಂಬಂಧಿಕರೊಬ್ಬರ ಸಹಾಯದಿಂದ ಅಗತ್ಯ ಹಣ ಹೊಂದಿಸಿದ್ದರು ಎಂದು ವರದಿ ತಿಳಿಸಿದೆ. ಖಾನ್ ಕಳ್ಳರ ಜತೆ ಸಂಪರ್ಕದಲ್ಲಿರಲು ಬೇರೆಯವರ ಫೋನ್ ಬಳಸುತ್ತಿದ್ದರು. ಬೇರೆ ಬೇರೆ ಕಡೆಗಳಲ್ಲಿ ಭೇಟಿಯಾಗುವಂತೆ ಸೂಚಿಸಿದ ಕಳ್ಳರು, ಪೊಲೀಸರಿಗೆ ಮಾಹಿತಿ ನೀಡಲಾಗಿದೆಯೇ ಎಂದು ಪರೀಕ್ಷಿಸುತ್ತಲೇ ಇದ್ದರು. ಅಂತಿಮವಾಗಿ ಮಯೂರ್ ವಿಹಾರ್ 3ನೇ ಹಂತದಲ್ಲಿ ಭೇಟಿಯಾಗುವುದು ನಿಗದಿಯಾಯಿತು. ಭೇಟಿ ಸಂದರ್ಭದಲ್ಲೂ ವಾಗ್ವಾದ ನಡೆಯಿತು. ಆರೋಪಿಗಳು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಆರೋಪಿಗಳನ್ನು ಹಿಡಿದಿದ್ದಾರೆ ಎನ್ನಲಾಗಿದೆ.