ನ್ಯೂಸ್ ನಾಟೌಟ್: ಮಡಿಕೇರಿ, ಕುಶಾಲನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ (BY Vijayednra) ಕಾರ್ಯಕ್ರಮ ನಡೆದಿತ್ತು. ಈ ವೇಳೆ ಕಳ್ಳರು ತಮ್ಮ ಕೈಚಳಕ ತೋರಿಸಿದ ಘಟನೆ ಬಗ್ಗೆ ವರದಿಯಾಗಿದೆ. ಮಾರ್ಚ್ 27ರಂದು ಖದೀಮರು ಅನೇಕರ ಪರ್ಸ್ (Purse theft) ಎಗರಿಸಿದ್ದು,ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆಜಿ ಬೋಪಯ್ಯ ಅವರ ಪರ್ಸ್ ಸಹ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಅಪ್ಪಚ್ಚು ರಂಜನ್ ಅವರ ಪರ್ಸ್ನಲ್ಲಿ ಸುಮಾರು 25000 ರೂ ಹಣವಿತ್ತು ಎನ್ನಲಾಗಿದೆ ಹಾಗೂ ಬೋಪಯ್ಯ ಅವರ ಪರ್ಸ್ನಲ್ಲಿ 17000 ರೂ. ಇತ್ತು ಎಂದು ವರದಿಯಾಗಿದೆ. ಇವಿಷ್ಟು ಮಾತ್ರವಲ್ಲ ಅನೇಕರ ಜೇಬಿನಲ್ಲಿದ್ದ ಪರ್ಸ್ ಕಳ್ಳತನವಾಗಿದ್ದು, ಸರಿ ಸುಮಾರು 5 ಲಕ್ಷ ರೂ.ಕ್ಕಿತಲೂ ಅಧಿಕ ಹಣ ಲಪಟಾಯಿಸಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.
ಕಳ್ಳರು ಬೇಕು ಬೇಕಂತಲೇ ಗುಂಪುಗಟ್ಟಿಕೊಂಡು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.ಬಿಜೆಪಿ ಅಭ್ಯರ್ಥಿ ಯದುವೀರ್ ಜೊತೆ ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಬಂದ ಕಳ್ಳರು ನೂಕು ನುಗ್ಗಲು ಸೃಷ್ಟಿ ಮಾಡಿ ಹಲವರ ಪರ್ಸ್ ಎಗರಿಸಿದ್ದಾರೆ. ಮೊದಲೇ ಪ್ಲ್ಯಾನ್ ಮಾಡಿಕೊಂಡೇ ಹೊರ ಜಿಲ್ಲೆಯಿಂದ ಬಂದ ಕಳ್ಳರ ತಂಡ ಈ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದ್ದು, ಕಳ್ಳರ ಪತ್ತೆಗೆ ಮಡಿಕೇರಿ ನಗರ ಪೊಲೀಸರು ಕಾರ್ಯಚರಣೆ ನಡೆಸಿದ್ದಾರೆ.
ಇನ್ನು ರಾಜಕೀಯ ಕಾರ್ಯಕ್ರಮದಲ್ಲಿ ಈ ರೀತಿ ಕಳ್ಳತನವಾಗಿರುವುದು ಇದು ಮೊದಲೇನಲ್ಲ. ಮೊಬೈಲ್ಗಳು ಸಮೇತ ಕಳ್ಳತನವಾಗಿರೋದ್ರ ಬಗ್ಗೆಯೂ ವರದಿಯಾಗಿದೆ. ಈ ಹಿಂದೆ ಕರ್ನಾಟಕದಲ್ಲಿ ನಡೆದ ರಾಜಕೀಯ ಕಾರ್ಯಕ್ರಮಗಳಲ್ಲಿ ಈ ರೀತಿ ಪ್ರಕರಣಗಳು ಸಹ ನಡೆದ ಉದಾಹರಣೆಗಳು ಇವೆ. ಅದರಲ್ಲೂ ಈಗ ಲೋಕಸಭಾ ಚುನಾವಣೆ ಇರುವುದರಿಂದ ಕಳ್ಳರಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು, ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಕೈಗೆ ಸಿಕ್ಕವರ ಫೋನ್, ಪರ್ಸ್ ಎಗರಿಸುತ್ತಿದ್ದಾರೆ.
ತಮ್ಮ-ತಮ್ಮ ನಾಯಕರನ್ನು ನೋಡಲು ಅಲ್ಲದೇ ಫೋಟೋ ಕ್ಲಿಕ್ಕಿಸಿಕೊಳ್ಳಲು ಕಾರ್ಯಕರ್ತರು ಮುಗಿಬೀಳುತ್ತಾರೆ.ಹೀಗಾಗಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರು, ಕಾರ್ಯಕರ್ತರು ಇಂತಹ ಖದೀಮರಿಂದ ಎಚ್ಚರಿಕೆಯಿಂದ ಇರುವುದು ಒಳಿತು.