ನ್ಯೂಸ್ ನಾಟೌಟ್: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಶನಿವಾರ ರಾತ್ರಿ ಕಡಬದ ಮರ್ಧಾಳದಲ್ಲಿ ನಡೆದಿತ್ತು. ಈ ಘಟನೆ ನಡೆದ ಬಳಿಕ ಸ್ಥಳದಲ್ಲಿ ಒಂದು ರೀತಿಯ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಈ ಬೆನ್ನಲ್ಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸ್ಥಳಕ್ಕೆ ಆಗಮಿಸಿದ್ದರು. ನೂರಾರು ಹಿಂದೂ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು.
ವ್ಯಕ್ತಿಯೊಬ್ಬರು ರಸ್ತೆ ದಾಟುವ ಪ್ರಯತ್ನದಲ್ಲಿದ್ದರು. ಈ ವೇಳೆ ಯಮಸ್ವರೂಪಿಯಾಗಿ ಬಂದ ಮಾರುತಿ 800 ಕಾರು ಪಾದಾಚಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದು ಅಸು ನೀಗಿದರು. ಮೃತರನ್ನು ಮರ್ಧಾಳ ನೆಕ್ಕಿತ್ತಡ್ಕ ಸಮೀಪದ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಎಂದು ಗುರುತಿಸಲಾಯಿತು. ರಕ್ತದ ನಡುವಿನಲ್ಲಿ ಬಿದ್ದಿದ್ದರೂ ಕಾರಿನ ಚಾಲಕ ಅದನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಮುಂದಕ್ಕೆ ತೆರಳುತ್ತಾನೆ. ಈ ವೇಳೆ ಸ್ಥಳೀಯರು ಆ ಕಾರನ್ನು ಫಾಲೋ ಮಾಡಿದಾಗ ಆರೋಪಿಗಳು ಕಾರನ್ನು ನೆಕ್ಕಿತ್ತಡ್ಕದ ರಶೀದ್ ಅನ್ನುವವರ ತೋಟದಲ್ಲಿ ನಿಲ್ಲಿಸಿ ಅಲ್ಲಿಂದ ದುಷ್ಕರ್ಮಿಗಳು ಕಾಲ್ಕಿತ್ತಿದ್ದಾರೆ. ಇದೇ ವೇಳೆ ಕೆಲವರಿಗೆ ಅನುಮಾನ ಬಂದು ಪರಿಶೀಲನೆ ನಡೆಸಿದಾಗ ಕಾರಿನಿಂದ ಅಣತಿ ದೂರದ ತೋಟವೊಂದರಲ್ಲಿ ದನವೊಂದನ್ನು ಕಟ್ಟಿ ಹಾಕಲಾಗಿತ್ತು. ಈ ವೇಳೆ ಇದು ಗೋ ಕಳ್ಳರ ಕೆಲಸ ಎಂದು ತಿಳಿದು ಬಂದಿದೆ. ತಕ್ಷಣ ಈ ಪ್ರಕರಣ ಮತ್ತೊಂದು ದಿಕ್ಕಿನತ್ತ ವಾಲಿತ್ತಲ್ಲದೆ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.
ಈ ಘಟನೆ ನಡೆದ ಕೆಲವು ಗಂಟೆಗಳಲ್ಲಿ ಹಿಂದೂ ಕಾರ್ಯಕರ್ತರೆಲ್ಲ ಒಂದಾಗಿ ಸೇರಿದರು. ಮಾತ್ರವಲ್ಲ ಕಡಬ ಆಸ್ಪತ್ರೆ ಮುಂದೆ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಎಸ್ ಪಿ ಬರಲೇಬೇಕು ಎಂದು ಪಟ್ಟು ಹಿಡಿಯಲಾಯಿತು. ರಾಜ್ಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ಕಾರರಿಗೆ ಸಾಥ್ ನೀಡಿದರು. ನಂತರ ಎಸ್ ಪಿ ರಿಷ್ಯಂತ್ ಸ್ಥಳಕ್ಕೆ ಆಗಮಿಸಿ ಭಾನುವಾರ ಸಂಜೆಯೊಳಗೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಂಡರು.