ನ್ಯೂಸ್ ನಾಟೌಟ್ : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಇಎಈ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು.ಇದೀಗ ಶಂಕಿತ ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹಾಗೂ ಸಿಸಿಬಿ ಭಾರಿ ಯಶಸ್ಸು ಕಂಡಿದೆ. ಕೆಫೆಗೆ ಬಾಂಬ್ ತಂದಿಟ್ಟು ಸ್ಫೋಟಿಸಿದ ವ್ಯಕ್ತಿ ರಾಜ್ಯದ ಮಲೆನಾಡು ಪ್ರದೇಶದವನು ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿಗೆ ಹೊರರಾಜ್ಯದಿಂದಲೇ ಬಸ್ಸಿನಲ್ಲಿ ಆಗಮಿಸಿದ್ದ ಶಂಕಿತ ವ್ಯಕ್ತಿ, ಕೃತ್ಯ ಎಸಗಿದ ಬಳಿಕ ಬಸ್ಸಿನಲ್ಲೇ ಹೊರರಾಜ್ಯಕ್ಕೆ ಪರಾರಿಯಾಗಿದ್ದು, ಸದ್ಯ ಆಂಧ್ರಪ್ರದೇಶದ ತಿರುಪತಿ ಅಥವಾ ತೆಲಂಗಾಣ ರಾಜ್ಯದ ಹೈದ್ರಾಬಾದ್ನಲ್ಲಿ ಆತ ಇದ್ದಾನೆ ಎನ್ನುವ ಸಾಧ್ಯತೆ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಶಂಕಿತನ ಗುರುತು ಸಿಕ್ಕಿದ ಬೆನ್ನಲ್ಲೇ ಆತನ ಸಂಪರ್ಕ ಜಾಲ ಭೇದಿಸಲು ದೂರವಾಣಿ ಕರೆಗಳ (ಸಿಡಿಆರ್) ಪರಿಶೀಲನೆ ಕಾರ್ಯವನ್ನು ತನಿಖಾ ಸಂಸ್ಥೆಗಳು ಆರಂಭಿಸಿವೆ ಎನ್ನಲಾಗಿದೆ.
ಕಳೆದ ನಾಲ್ಕು ವರ್ಷ ಅವಧಿಯಲ್ಲಿ ನಡೆದಿರುವ ಮಂಗಳೂರಿನ ದೇಶ ವಿರೋಧಿ ಗೋಡೆ ಬರಹ ಪ್ರಕರಣ, ಮಂಗಳೂರು ಕುಕ್ಕರ್ ಸ್ಫೋಟ, ಶಿವಮೊಗ್ಗ ಜಿಲ್ಲೆ ತುಂಗಾ ತೀರದಲ್ಲಿ ಬಾಂಬ್ ಪ್ರಯೋಗಾರ್ಥ ಪರೀಕ್ಷೆ ಪ್ರಕರಣ, ತಮಿಳುನಾಡಿನ ಕೊಯಮತ್ತೂರಿನ ಬಾಂಬ್ ಸ್ಫೋಟ ಹಾಗೂ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಗಳಿಗೆ ಪರಸ್ಪರ ನಂಟಿದೆ ಎನ್ನಲಾಗುತ್ತಿದೆ. ಈಗ ಕೆಫೆ ಸ್ಫೋಟದಲ್ಲಿಯೂ ಕರ್ನಾಟಕದ ಮಲೆನಾಡು ಜಿಲ್ಲೆಯ ವ್ಯಕ್ತಿ ಪಾತ್ರವಹಿಸಿರುವುದು ಪತ್ತೆಯಾಗಿದ್ದು ಭಾರಿ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಂಗಳೂರು ಕುಕ್ಕರ್ ಸ್ಫೋಟ ಹಾಗೂ ಶಿವಮೊಗ್ಗ ಜಿಲ್ಲೆ ಬಾಂಬ್ ಪ್ರಯೋಗಾರ್ಥ ಸ್ಫೋಟದಲ್ಲಿ ಪತ್ತೆಯಾಗಿದ್ದ ಸ್ಫೋಟಕ ವಸ್ತುಗಳಿಗೂ ರಾಮೇಶ್ವರ ಕೆಫೆ ಸ್ಫೋಟದ ಬಾಂಬ್ ತಯಾರಿಕೆಗೆ ಬಳಸಲಾಗಿದ್ದ ವಸ್ತುಗಳಿಗೂ ತಾಳೆಯಾಗಿದೆ ಎನ್ನಲಾಗಿದ್ದು, ಹೀಗಾಗಿ ಶಿವಮೊಗ್ಗ ಪ್ರಕರಣದಲ್ಲಿ ತಪ್ಪಿಸಿಕೊಂಡಿದ್ದ ಪ್ರಮುಖ ಹ್ಯಾಂಡ್ಲರ್ಗಳೇ ಕೆಫೆ ಕೃತ್ಯದಲ್ಲಿ ಪಾತ್ರವಹಿಸಿರುವ ಶಂಕೆ ವ್ಯಕ್ತವಾಗಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಹಾಗೂ ಶಿವಮೊಗ್ಗದ ಬಾಂಬ್ ಪ್ರಯೋಗಾರ್ಥ ಪರೀಕ್ಷೆ ಪ್ರಕರಣಗಳಲ್ಲಿ ಶಂಕಿತ ಐಸಿಸ್ ಉಗ್ರರಾದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಅಬ್ದುಲ್ ಮತೀನ್ ತಾಹ ಹಾಗೂ ಮುಸಾಬೀರ್ ಹುಸೇನ್ ತಲೆಮರೆಸಿಕೊಂಡಿದ್ದಾರೆ. ಆ ಎರಡು ಕೃತ್ಯಗಳಲ್ಲಿ ಮತೀನ್ ಹಾಗೂ ಮುಸಾಬೀರ್ ಹ್ಯಾಂಡ್ಲರ್ಗಳಾಗಿದ್ದರು. ಹೀಗಾಗಿ ಈಗ ಕೆಫೆ ಬಾಂಬ್ ಸ್ಫೋಟದ ಶಂಕಿತನ ಹಿಂದೆ ಸಹ ಈ ಇಬ್ಬರು ಇರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.