ವಿಮರ್ಶೆ: ಹೇಮಂತ್ ಸಂಪಾಜೆ
ನ್ಯೂಸ್ ನಾಟೌಟ್: ಇದೀಗ ಎಲ್ಲ ಕಡೆಯೂ ಲೋಕಸಭಾ ಚುನಾವಣೆಯದ್ದೇ ಮಾತು. ಅದರಲ್ಲೂ ದಕ್ಷಿಣ ಕನ್ನಡ ಮತ್ತು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಗೆಗಿನ ಜನರ ಕುತೂಹಲ ದುಪ್ಪಟ್ಟಾಗಿದೆ. ಅವರು ನಿಲ್ಲಬಹುದಂತೆ, ಇವರಿಗೆ ಟಿಕೆಟ್ ಸಿಗಲ್ವಂತೆ, ಹಾಗಂತೆ ಹೀಗಂತೆ ಅನ್ನುವ ಅಂತೆ ಕಂತೆಗಳ ಕಥೆ ಜೋರಾಗಿರುವಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಕೊಡಗು-ಮೈಸೂರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡು ಸಲ ಗೆದ್ದಿರುವ ಪ್ರತಾಪ್ ಸಿಂಹ ಈ ಸಲ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಲಿದ್ದಾರೆ ಅನ್ನೊ ವಿಚಾರ ಮುನ್ನಲೆಗೆ ಬರುತ್ತಿದೆ. ಈ ವಿಚಾರ ನಿಜಾನಾ..? ಅನ್ನುವ ಬಗ್ಗೆ ಇದೀಗ ಚರ್ಚೆ ಶುರುವಾಗಿದೆ.
ಬಿಜೆಪಿ ಮೂಲಗಳು ಹೇಳುವ ಪ್ರಕಾರ ಕೊಡಗು -ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್ ಸಿಂಹ ಬದಲಿಗೆ ಮೈಸೂರಿನ ರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ್ ಒಡೆಯರ್ ಸ್ಪರ್ಧೆ ಮಾಡಲಿದ್ದಾರೆ. ಮತ್ತೊಂದು ಕಡೆ ಎರಡು ಸಲ ಗೆದ್ದು ಬೀಗಿರುವ ಪ್ರತಾಪ್ ಸಿಂಹ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಕಣಕ್ಕೆ ಇಳಿಸೋಕೆ ಬಿಜೆಪಿ ಹೈಕಮಾಂಡ್ ನಿಂದ ಚಿಂತನೆ ನಡೆಸಲಾಗಿದೆ ಎನ್ನಲಾಗ್ತಿದೆ.
ಪ್ರತಾಪ್ ಸಿಂಹ ದಕ್ಷಿಣ ಕನ್ನಡ ಜಿಲ್ಲೆಯಿಂದ ಸ್ಪರ್ಧಿಸಬಹುದು ಅನ್ನುವುದನ್ನು ಅಲ್ಲಗೆಳೆಯುವಂತಿಲ್ಲ, ಪ್ರತಾಪ್ ಸಿಂಹ ಜನರಿಗೆ ಪರಿಚಿತರು. ಪತ್ರಕರ್ತನಾಗಿ ಬರಹಗಳಿಂದಲೇ ಜನರ ಹೃದಯ ಗೆದ್ದವರು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಬಹಳ ಚೆನ್ನಾಗಿಯೇ ಗೊತ್ತು. ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ನಡೆಸುತ್ತಿರುವಾಗಲೇ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಚೆನ್ನಾಗಿ ಬಲ್ಲವರು. ಸದ್ಯ ದಕ್ಷಿಣ ಕನ್ನಡದಿಂದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಬ್ರಿಜೇಶ್ ಚೌಟಾ, ನಳಿನ್ ಹೆಸರು ಕೇಳಿ ಬರುತ್ತಿದೆ. ಆದರೆ ನಳಿನ್ ಗೆ ಟಿಕೆಟ್ ಸಿಗುವ ಸಾಧ್ಯತೆಗಳು ಇಲ್ಲ ಎನ್ನಲಾಗುತ್ತಿದೆ. ಬ್ರಿಜೇಶ್ ಚೌಟಾ ಹೆಸರು ಕೇಳಿ ಬರುತ್ತಿದೆಯಾದರೂ ಅವರು ಹೊಸಬರು, ಅವರಿಗೆ ಅನುಭವ ಕಡಿಮೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಿಂದ ಪ್ರತಾಪ್ ಸಿಂಹ ಅವರಿಂದ ಬೆಸ್ಟ್ ಕ್ಯಾಡಿಡೆಟ್ ಇಲ್ಲ ಅನ್ನುವ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.
ಸದ್ಯ ಅವರಿಗೆ ಮೈಸೂರಿನಿಂದ ಟಿಕೆಟ್ ಸಿಗುವುದಿಲ್ಲ ಅನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ‘ಟಿಕೆಟ್ ಸಿಗುವ ನಿರೀಕ್ಷೆ ಇದೆ. ಸಿಗದಿದ್ದರೆ ನೋವಿಲ್ಲ. ನಾನೊಬ್ಬ ಕಾರ್ಯಕರ್ತನಾಗಿ ಮನೆಮನೆಗೆ ಹೋಗಿ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ’ ಎಂದು ಪ್ರತಾಪ್ ಸಿಂಹ ನೋವಿನಿಂದ ಹೇಳಿಕೊಂಡಿದ್ದನ್ನು ಸ್ಮರಿಸಬಹುದು. ಇವರನ್ನು ಸಮಾಧಾನ ಪಡಿಸುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಟಿಕೆಟ್ ನೀಡಲಾಗುತ್ತದೆಯೇ ಅನ್ನುವುದನ್ನು ಕಾದು ನೋಡಬೇಕಿದೆ.