ನ್ಯೂಸ್ ನಾಟೌಟ್: ಕರ್ನಾಟಕದ ಮತ್ತು ತಮಿಳುನಾಡಿನ ಕಾಡುಗಳ್ಳ, ಆನೆ ದಂತ ಚೋರ ವೀರಪ್ಪನ್ ಪುತ್ರಿ ವಿದ್ಯಾರಾಣಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ. ತಮಿಳುನಾಡಿನ ಕೃಷ್ಣಗಿರಿ ಲೋಕಸಭೆ ಕ್ಷೇತ್ರದಲ್ಲಿ ನಾಮ್ ತಮಿಳರ್ ಕಚ್ಚಿ (NTK) ಪಕ್ಷದಿಂದ ವಿದ್ಯಾರಾಣಿ ಸ್ಪರ್ಧಿಸುವುದು ಖಚಿತವಾಗಿದೆ ಎಂದು ವರದಿ ತಿಳಿಸಿದೆ.
ಈ ಕುರಿತು ಎನ್ಟಿಕೆ ಪಕ್ಷದ ಮುಖ್ಯಸ್ಥ ಸೀಮನ್ ಘೋಷಣೆ ಮಾಡಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದಷ್ಟೇ ವಿದ್ಯಾರಾಣಿ ಎನ್ಟಿಕೆ ಪಕ್ಷವನ್ನು ಸೇರ್ಪಡೆಯಾಗಿದ್ದರು. ನಟ-ನಿರ್ದೇಶಕ ಸೀಮನ್ ನೇತೃತ್ವದ ಪಕ್ಷ ಅದಾಗಿದೆ. “ವಿದ್ಯಾರಾಣಿ ತಮಿಳುನಾಡಿನ ಕೃಷ್ಣಗಿರಿ ಲೋಕಸಭೆ ಕ್ಷೇತ್ರದಲ್ಲಿ ಎನ್ಟಿಕೆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ” ಎಂಬುದಾಗಿ ಎನ್ಟಿಕೆ ಮುಖ್ಯಸ್ಥ ಸೀಮನ್ ಮಾಹಿತಿ ನೀಡಿದ್ದಾರೆ.
ವಿದ್ಯಾರಾಣಿ ವೃತ್ತಿಯಿಂದ ವಕೀಲರಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ಐದು ವರ್ಷ ಕಾನೂನು ಅಧ್ಯಯನ ಮಾಡಿದ್ದಾರೆ ಮತ್ತು ಕೃಷ್ಣಗಿರಿಯಲ್ಲಿ ಶಾಲೆಯೊಂದನ್ನು ಮುನ್ನಡೆಸುತ್ತಿದ್ದಾರೆ ಎನ್ನಲಾಗಿದೆ. ಆ ಮೂಲಕ ಬಡಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. 2020ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ವಿದ್ಯಾರಾಣಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಘಟಕದ ಉಪಾಧ್ಯಕ್ಷೆಯಾಗಿದ್ದರು. ಬಳಿಕ ಎನ್ಟಿಕೆ ಸೇರ್ಪಡೆಯಾಗಿದ್ದಾರೆ. ಇವರ ತಾಯಿ ಮುತ್ತುಲಕ್ಷ್ಮೀ ಶಾಸಕ ಟಿ. ವೇಲ್ಮುರುಗನ್ ನೇತೃತ್ವದ ಪಕ್ಷದಲ್ಲಿದ್ದಾರೆ ಎನ್ನಲಾಗಿದೆ.