ನ್ಯೂಸ್ ನಾಟೌಟ್:ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election 2024) ದಿನಗಣನೆ ಆರಂಭಗೊಂಡಿದೆ. ಈಗಾಗಲೇ ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದು,ಇದರ ಜೊತೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯೂ ಭುಗಿಲೆದ್ದಿದೆ.
ಇದೀಗ ಚಿಕ್ಕಮಗಳೂರು ಬಿಜೆಪಿಯಲ್ಲೂ ಅಸಮಾಧಾನ ಸ್ಫೋಟಗೊಂಡಿದ್ದು,ಇದರಿಂದ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರ್ಯಕ್ರಮ ದಿಢೀರ್ ರದ್ದುಗೊಂಡಿರುವ ಘಟನೆ ಬಗ್ಗೆಯೂ ವರದಿಯಾಗಿದೆ.ಹೌದು.. ಮೂಡಿಗೆರೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡ ಬೆನ್ನಲ್ಲೇ ಕೋಟ ಶ್ರೀನಿವಾಸ ಪೂಜಾರಿ ಅವರು ಭಾಗವಹಿಸಬೇಕಾಗಿದ್ದ ಕಾರ್ಯಕ್ರಮ ಚಿಕ್ಕಮಗಳೂರಿನಲ್ಲಿ ರದ್ದುಗೊಂಡಿದೆ.
ಚಿಕ್ಕಮಗಳೂರಿನಲ್ಲಿ ಪ್ರಚಾರ ಕಾರ್ಯ ಆರಂಭಿಸಬೇಕಿತ್ತು.ಹೀಗಾಗಿ ಮೂಡಿಗೆರೆ ತಾಲೂಕಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಭಾಗಿಯಾಗಬೇಕಿತ್ತು. ಆದರೆ ಪದಗ್ರಹಣ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ಸ್ವಾಭಿಮಾನಿ ಸಮಾವೇಶ ಆಯೋಜನೆ ಮಾಡಿದ್ದರಿಂದ ಗೊಂದಲ ಉಂಟಾಗಿದೆ.ಮೂಡಿಗೆರೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ಬಿಜೆಪಿ ಸ್ವಾಭಿಮಾನಿ ಸಮಾವೇಶ ಆಯೋಜನೆ ಮಾಡಿದ್ದು, ಇದರಿಂದ ಮೂಡಿಗೆರೆ ಬಿಜೆಪಿ ಕಚೇರಿಯಲ್ಲಿ ನಡೆಯಬೇಕಿದ್ದ ಪದಗ್ರಹಣ ಕಾರ್ಯಕ್ರಮ ರದ್ದುಗೊಂಡಿದೆ.
ಮೂಡಿಗೆರೆ ತಾಲೂಕು ಮಂಡಲ ಅಧ್ಯಕ್ಷ ಸ್ಥಾನದ ವಿಚಾರವಾಗಿ ಹೊಡೆದಾಟ ನಡೆದಿದ್ದು,ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ರತನ್ ಹಾಗೂ ಅನು ಕುಮಾರ್ ಬಣಗಳ ನಡುವೆ ಗಲಾಟೆ ಆಗಿತ್ತು.ಇದರಿಂದ ಬಿಜೆಪಿ ಹಿರಿಯ ಮುಖಂಡ ಅನುಕುಮಾರ್ ಸೇರಿದಂತೆ ಕಾರ್ಯಕರ್ತರನ್ನ ಜಿಲ್ಲಾಧ್ಯಕ್ಷ ಅಮಾನತು ಮಾಡಿದ್ದರು.ಈ ಅಮಾನತು ಪ್ರಶ್ನಿಸಿ ಮೂಡಿಗೆರೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಹೀಗಾಗಿ ಸಾವಿರಾರು ಸಂಖ್ಯೆಯಲ್ಲಿ ಸ್ವಾಭಿಮಾನಿ ಸಮಾವೇಶದಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು. ಇತ್ತ ಮೂಡಿಗೆರೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡ ಕಾರಣ ಇದರ ಎಫೆಕ್ಟ್ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತಾಗಿ ಕಾರ್ಯಕ್ರಮ ರದ್ದುಗೊಂಡಿದೆ.