ನ್ಯೂಸ್ ನಾಟೌಟ್: ಈ ಬೇಸಿಗೆ ಟೈಮ್ನಲ್ಲಿ ನಿಂಬೆ ಹಣ್ಣಿನ ಬೆಲೆ ದುಬಾರಿಯಾಗಿದೆ.ಆದರೂ ಮಾಮೂಲಿ ದಿನದಲ್ಲಿ 10 ರೂ.ಗೆ ಮೂರ್ನಾಲ್ಕು ನಿಂಬೆ ಹಣ್ಣುಗಳು ಸಿಕ್ಕಿದರೂ ಇದೀಗ ಬಿಸಿಲ ಬೇಗೆಯ ಸಮಯದಲ್ಲಿ ಒಂದು ಹಣ್ಣಿಗೆ 7 ರೂ.ಯಷ್ಟು ಚಾರ್ಜ್ ಮಾಡುತ್ತಿದ್ದಾರೆ.ಇದರ ಬೆಲೆಯೇ ಜಾಸ್ತಿಯಾಯ್ತು ಅನ್ನುತ್ತಿರುವಾಗಲೇ ಈ ದೇವಾಲಯದಲ್ಲಿ ಒಂದು ಹಣ್ಣನ್ನು ಲಕ್ಷ ಲಕ್ಷ ಕೊಟ್ಟು ಜನ ಖರೀದಿಸುತ್ತಾರೆ ಗೊತ್ತಾ? ಅದ್ಯಾಕೆ ಅನ್ನೋದರ ಸ್ವಾರಸ್ಯಕರ ವಿಚಾರಗಳ ಬಗ್ಗೆ ತಿಳಿಸ್ತೀವಿ ನೋಡಿ..
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮುರುಗನ್ ದೇವಸ್ಥಾನದಲ್ಲಿ ಪ್ರತಿ ವರ್ಷ ಅದ್ಧೂರಿಯಾಗಿ 9 ದಿನಗಳ ಕಾಲ ಉತಿರಂ ಹಬ್ಬವನ್ನು ಆಚರಿಸಲಾಗುತ್ತದೆ. ಅಂತೆಯೇ ಈ ಬಾರಿ ನಡೆದ ಹಬ್ಬದ ಸಮಯದಲ್ಲಿ ಭಕ್ತರೊಬ್ಬರು ಮೊದಲ ದಿನದಂದು ಒಂದು ನಿಂಬೆ ಹಣ್ಣನ್ನು ಹರಾಜಿನಲ್ಲಿ 50,500 ರೂ.ಗೆ ಖರೀದಿಸಿದ್ದಾರೆ.ಹೀಗೆ 9 ದಿನಗಳ ದೇವರ ಪೂಜಾ ಸಮಯದಲ್ಲಿ ಒಂದೊಂದು ದಿನ ದೇವರ ತ್ರಿಶೂಲದ ಮೇಲೆ ಲಿಂಬೆ ಹಣ್ಣುಗಳನ್ನು ಇಟ್ಟು ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಈ ಲಿಂಬೆಹಣ್ಣಿನಲ್ಲಿ ವಿಶೇಷ ಶಕ್ತಿಯಿದೆ ಎಂದು ಸಾಕಷ್ಟು ವರ್ಷಗಳಿಂದ ಭಕ್ತರು ನಂಬಿಕೊಂಡು ಬಂದಿದ್ದಾರೆ. ಸಂತಾನದೋಷದಿಂದ ಬಳಲುತ್ತಿರುವ ದಂಪತಿಗೆ ಈ ಲಿಂಬೆಹಣ್ಣು ಸಿಕ್ಕಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಇದರ ಹೊರತಾಗಿ ಯಾರು ಈ ಲಿಂಬೆಯನ್ನು ಪಡೆಯುತ್ತಾರೆಯೋ ಅವರು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಎಂದು ನಂಬಲಾಗಿದೆ.
ಇಷ್ಟೆಲ್ಲಾ ನಂಬಿಕೆಗಳಿಂದಲೇ ಆ ವಿಶೇಷ ಲಿಂಬೆ ಹಣ್ಣು ಪಡೆಯಲು ದಂಪತಿ, ಸೇರಿದಂತೆ ಸಾಕಷ್ಟು ಉದ್ಯಮಿಗಳು ಪೈಪೋಟಿ ನಡೆಸುತ್ತಾರೆ. ಈ ವರ್ಷವೂ ನಡೆದ ಹಬ್ಬದ ಸಮಯದಲ್ಲಿ ಮೊದಲ ದಿನ 50,500ರೂ. ಗೆ ಮಾರಾಟವಾದ ಲಿಂಬೆ, 2ನೇ ದಿನ ಮತ್ತು 3ನೇ ದಿನ 26,500ರೂ ಮತ್ತು 42,100ರೂ ಗೆ ಮಾರಾಟವಾಗಿದೆ. 4ನೇ ದಿನ 1900ರೂ, 5ನೇ ದಿನ 11,000ರೂ, 6ನೇ ದಿನ 34,000ರೂ, 7ನೇ ದಿನ 24,500ರೂ, 8ನೇ ದಿನ 13500, ಮತ್ತು 9ನೇ ದಿನ 15000ರೂಗಳಿಗೆ ಮಾರಾಟವಾಗಿ ಒಟ್ಟು 9 ದಿನಗಳಲ್ಲಿ 9 ನಿಂಬೆ ಹಣ್ಣು 236000ಕ್ಕೆ ಮಾರಾಟವಾಗಿದೆ.