ನ್ಯೂಸ್ ನಾಟೌಟ್: ಬದಲಾವಣೆಗೆ ಹೊಂದಿಕೊಳ್ಳಲು ಜನ ಜಾಗೃತಿ ಪ್ರಮುಖ ಪಾತ್ರ ವಹಿಸುತ್ತದೆ. ಮುಟ್ಟಿನ ಕಪ್ ವಿಚಾರದಲ್ಲೂ ಜಾಗೃತಿ ಮುಖ್ಯವಾಗಿದೆ. ಹಾಗಿದ್ದರೆ ಮುಟ್ಟಿನ ಕಪ್ ಎಂದರೇನು..? ಮಹಿಳೆಯರಿಗೆ ಇದು ಹೇಗೆ ಸಹಕಾರಿಯಾಗಿದೆ..? ಇದೆಲ್ಲದರ ಬಗ್ಗೆ ಕೆ.ವಿ.ಜಿ ವೈದ್ಯೆ ಗೀತಾ ದೊಪ್ಪ ಬರೆದಿದ್ದೇನು..? ಇಲ್ಲಿದೆ ಓದಿ ಪೂರ್ಣ ಅಂಕಣ.
ಈ ಮುಟ್ಟಿನ ಕಪ್ ಬಗ್ಗೆ ಹೆಚ್ಚಿನ ಮಹಿಳೆಯರಿಗೆ ಮಾಹಿತಿ ಕೊರತೆಯಿದೆ. ಹಾಗಾಗಿ ಮೊದಲಿಗೆ ಮುಟ್ಟಿನ ಕಪ್ ಎಂದರೇನು ಎಂದು ತಿಳಿದುಕೊಳ್ಳೋಣ.
ಇದು ಒಂದು ನೈರ್ಮಲ್ಯ (Hygiene) ಉತ್ಪನ್ನವಾಗಿದೆ. ಋತುಚಕ್ರದ ಸಮಯದಲ್ಲಿ ರಕ್ತವನ್ನು ಸಂಗ್ರಹಿಸಲು ಯೋನಿಯೊಳಗೆ ಸೇರಿಸಲಾಗುತ್ತದೆ. ಇದು ಕಾಂಡವನ್ನು ಹೊಂದಿರುವ ಸಣ್ಣ ಬಟ್ಟಲಿನಂತೆ(ಕಪ್) ಕಾಣುತ್ತದೆ. ಇದು ಸಾಮಾನ್ಯವಾಗಿ ಸಿಲಿಕಾನ್ನಿಂದ ಮಾಡಲ್ಪಟ್ಟಿದೆ. ಇದು ಅಲರ್ಜಿ ಮುಕ್ತ ಮತ್ತು ತುಂಬಾ ಮೃದುವಾಗಿರುತ್ತದೆ. ಕಪ್ ಗಳು ವಿವಿಧ ಗಾತ್ರಗಳಲ್ಲಿ ಲಭ್ಯವಿರುತ್ತದೆ.
ವಿವಿಧ ಗಾತ್ರಗಳಲ್ಲಿರುವ ಕಪ್
1) ಚಿಕ್ಕದು ಸಾಮಾನ್ಯವಾಗಿ ಅವಿವಾಹಿತ ಮಹಿಳೆಯರಿಗೆ ಬಳಸಬಹುದು.
2) ವಿವಾಹಿತರಿಗೆ ಮತ್ತು ಮಕ್ಕಳನ್ನು ಹೆರಿಗೆಯಾಗದೇ ಇರುವವರು ಮಧ್ಯಮ ಗಾತ್ರದ ಕಪ್ ನ್ನು ಬಳಸಬಹುದು.
3) ಮಗುವನ್ನು ಹೆರಿಗೆಯಾದ ಮಹಿಳೆಯರಿಗೆ ದೊಡ್ಡ ಗಾತ್ರದ ಕಪ್ ಬಹಳ ಸೂಕ್ತ.
ಮುಟ್ಟಿನ ಕಪ್ ಬಳಸೋದು ಹೇಗೆ?
1) ಮೊದಲು ಕಪ್ ಅನ್ನು ಸ್ವಚ್ಛಗೊಳಿಸಿ, ಸುಮಾರು 7 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ.
2) ನಿಮ್ಮ ಕೈಗಳನ್ನು ಸೋಪ್ ಹಾಕಿ ನೀರಿನಿಂದ ತೊಳೆಯಿರಿ
3) ಸುಲಭವಾದ ಅಳವಡಿಕೆಗಾಗಿ ಕಪ್ ನ ಅಂಚನ್ನು ತೇವಗೊಳಿಸಿ
4) ಕಪ್ ಅನ್ನು ಮಧ್ಯದಲ್ಲಿ ಹಿಡಿದುಕೊಂಡು, ಅದನ್ನು ಹಿಂಡಿ ಯೋನಿಯ ಒಳಗೆ ಸೇರಿಸಿ ಅಥವಾ ಒಳಸೇರಿಸುವಿಕೆಗೆ ಕಿರಿದಾಗುವಂತೆ ಮಾಡಲು ಕಪ್ ನ ಒಂದು ಮೂಲೆಯನ್ನು ಮಡಿಸಿ. ಒಳಸೇರಿಸುವ ಮೊದಲು ಅದರ ಗಾತ್ರವನ್ನು ಕಡಿಮೆ ಮಾಡಲು ಹಾಗೂ ಕಪ್ ಅನ್ನು ಹಿಂಡಲು ವಿಭಿನ್ನ ಮಾರ್ಗಗಳಿವೆ ಅದನ್ನು ಅನುಸರಿಸಬಹುದು. (ಕೆಳಗಿನ ಚಿತ್ರದಲ್ಲಿ ತೋರಿಸಿದಂತೆ)
ಅದನ್ನು ಹಿಸುಕಿದ ನಂತರ ಬಳಕೆದಾರರು ಸ್ಕ್ವಾಟಿಂಗ್ ಅಥವಾ ಕುಳಿತುಕೊಳ್ಳುವ ಭಂಗಿಯಲ್ಲಿ ಅಥವಾ ಕಪ್ ಅನ್ನು ಸೇರಿಸಲು ನಾವು ಒಂದು ಕಾಲನ್ನು ಎತ್ತಿಯೂ ಸಹ ಕಪ್ ಅನ್ನು ಯೋನಿಯೊಳಗೆ ಸೇರಿಸಬಹುದು. ಮುಟ್ಟಿನ ಕಪ್ ಅನ್ನು ಯೋನಿಯೊಳಗೆ ಸೇರಿಸಿದಾಗ, ಅದು ತೆರೆದುಕೊಂಡು ರಕ್ತಸ್ರಾವನನ್ನು ಸಂಗ್ರಹಿಸುತ್ತದೆ ಹಾಗೂ ಸೋರಿಕೆಯಾಗದಂತೆ ತಡೆಯುತ್ತದೆ.
ಕಪ್ ತಗೆಯಲು ಅನುಸರಿಸಬೇಕಾದ ವಿಧಾನ
1) ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ. ನಿಮ್ಮ ತೋರು ಬೆರಳು ಮತ್ತು ಹೆಬ್ಬೆರಳನ್ನು ನಿಮ್ಮ ಯೋನಿಯೊಳಗೆ ಇರಿಸಿ.
2) ಕಾಂಡವನ್ನು ಹಿಡಿದು ಕಪ್ ಅನ್ನು ತೆಗೆದುಹಾಕಲು ಕೆಳಗೆ ಎಳೆಯಿರಿ. ಇದನ್ನು ಪ್ರತಿ 12 ಗಂಟೆಗಳಿಗೊಮ್ಮೆ ತೆಗೆದುಹಾಕಬೇಕು. ಮತ್ತೆ ನೀರಿನಿಂದ ತೊಳೆದು ಮತ್ತೆ ಸೇರಿಸಲಾಗುತ್ತದೆ. ರಕ್ತಸ್ರಾವ ಹೆಚ್ಚು ಇದ್ದರೆ ಬಳಕೆದಾರರು ಅದನ್ನು 8 ಗಂಟೆಗಳಿಗೊಮ್ಮೆ ಬದಲಾಯಿಸಬೇಕಾಗಬಹುದು. ಮುಟ್ಟಿನ ಅವಧಿ ಮುಗಿದ ನಂತರ ಮತ್ತೊಮ್ಮೆ ಕುದಿಸಿ ಮತ್ತು ಕಪ್ ಅನ್ನು ಒಣಗಿಸಿ ಹಾಗೂ ಮುಂದಿನ ಋತುಚಕ್ರಕ್ಕೆ ಬಳಸಲು ಅದರ ಕವರ್ನಲ್ಲಿ ಇರಿಸಬೇಕು.
ಮುಟ್ಟಿನ ಕಪ್ ಪ್ರಯೋಜನಗಳು
1) ನಾವು ಕಪ್ 12 ಗಂಟೆಗಳವರೆಗೆ ಇರಿಸಬಹುದು, ಆದರೆ ರಕ್ತಸ್ರಾವದ ಆಧಾರದ ಮೇಲೆ ಕೆಲವು ಬಾರಿ ಬದಲಾಯಿಸಬೇಕಾಗುತ್ತದೆ.
2) ಇದು ಪರಿಸರ ಸ್ನೇಹಿಯಾಗಿದೆ ಏಕೆಂದರೆ, ಸಾವಿರಾರು ಸ್ಯಾನಿಟರಿ ಪ್ಯಾಡ್ಗಳನ್ನು ಬಳಸುವುದರಿಂದ ಅದನ್ನು ವಿಲೇವಾರಿ ಮಾಡಬೇಕಾಗುತ್ತದೆ ಮತ್ತು ಅದು ಪರಿಸರಕ್ಕೆ ಅಪಾಯವನ್ನು ಉಂಟುಮಾಡುತ್ತದೆ.
3) ಪಾಕೆಟ್ ಸ್ನೇಹಿ ಕೂಡ ಹೌದು ಏಕೆಂದರೆ ಇದನ್ನು ಅನೇಕ ಬಾರಿ ಬಳಸಬಹುದು. ಒಂದು ಕಪ್ ಅನ್ನು 10 ವರ್ಷಗಳವರೆಗೆ ಬಳಸಬಹುದು.
4) ಮುಟ್ಟಿನ ಕಪ್ಗಳು ಪ್ಯಾಡ್ ಅಥವಾ ಟ್ಯಾಂಪೂನ್ಗಳಿಗಿಂತ ಸುಮಾರು ಎರಡು ಪಟ್ಟು ಜಾಸ್ತಿ ರಕ್ತವನ್ನು ಹಿಡಿದಿಟ್ಟುಕೊಳ್ಳುತ್ತವೆ ಎಂದು ತಿಳಿದುಬಂದಿದೆ. ಅವು ಕಡಿಮೆ ವಾಸನೆಯನ್ನು ಹೊಂದಿರುತ್ತವೆ ಮತ್ತು ಕಡಿಮೆ ಯೋನಿ ಶುಷ್ಕತೆಯನ್ನು ಉಂಟುಮಾಡುತ್ತವೆ ಎಂದು ತಿಳಿದುಬಂದಿದೆ.
ಕಪ್ ಗಳನ್ನು ತೆಗೆದು ಹಾಕಲು ಮರೆಯಬಾರದು ಹಾಗೂ 2-3 ದಿನಗಳವರೆಗೆ ಯೋನಿಯಲ್ಲಿ ಇಡಬಾರದು ಏಕೆಂದರೆ ಇದು ತೀವ್ರವಾದ ಸೋಂಕನ್ನು ಉಂಟುಮಾಡುತ್ತದೆ. ಈ ಪರಿಸರ ಸ್ನೇಹಿ ಮತ್ತು ಪಾಕೆಟ್ ಸ್ನೇಹಿ ಮುಟ್ಟಿನ ಕಪ್ಗಳನ್ನು ಮಹಿಳೆಯರು ಯಾವುದೇ ಮುಜುಗರವಿಲ್ಲದೆ ಉಪಯೋಗಿಸಿ ಸೋಂಕು ಮುಕ್ತರಾಗೋಣ.