- +91 73497 60202
- [email protected]
- November 24, 2024 6:22 PM
ನ್ಯೂಸ್ ನಾಟೌಟ್: ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದೀಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಗಮನಾರ್ಹ ಸಾಧನೆ ಮಾಡಿದೆ. ಕಳೆದ ಹಲವಾರು ವರ್ಷಗಳಿಂದ ಜನ ಸೇವೆಯಲ್ಲಿ ನಿರತರಾಗಿದ್ದ ದಿವಂಗತ ಕುರುಂಜಿ ವೆಂಕಟರಮಣ ಗೌಡರು ಕಟ್ಟಿ ಬೆಳೆಸಿದ ಕೆವಿಜಿ ಸಂಸ್ಥೆಯನ್ನು ಹುಡುಕಿಕೊಂಡು ಇಂಗ್ಲೆಂಡ್ ನಿಂದ ಯುವತಿಯೊಬ್ಬಳು ಚಿಕಿತ್ಸೆಗಾಗಿ ಬಂದಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ನಮ್ಮ ಪ್ರತಿನಿಧಿ ಹರ್ಷಿತಾ ವಿನಯ್ ಅವರು ಎಲಿಜಬೆತ್ ಆನ್ ಜೇಮ್ಸ್ ಅವರೊಂದಿಗೆ ನಡೆಸಿರುವ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ ಓದಿ. ಕೆವಿಜಿ ಆಯುರ್ವೇದ ಹಾಸ್ಪಿಟಲ್ ಗೆ ನೀವು ಚಿಕಿತ್ಸೆಗೆಂದು ಇಂಗ್ಲೆಂಡ್ ನಿಂದ ಬಂದಿರುವುದು ಕೇಳಿ ತಿಳಿಯಿತು, ಭಾರತದಲ್ಲಿ ಅನೇಕ ಆಯುರ್ವೇದ ಹಾಸ್ಪಿಟಲ್ ಗಳಿವೆ, ಆದರೆ ನೀವು ಕೆವಿಜಿ ಆಸ್ಪತ್ರೆಯನ್ನೇ ಆಯ್ಕೆ ಮಾಡಿಕೊಂಡಿರುವುದೇಕೆ..? – ನಾನು ಗೋವಾಕ್ಕೆಂದು ಬಂದಿದ್ದೆ, ಗೋವಾ ಅಂದ್ರೆ ನನಗೆ ಅಚ್ಚುಮೆಚ್ಚು. ಪ್ರತಿ ಸಲವೂ ನಾನು ಭಾರತಕ್ಕೆ ಭೇಟಿ ನೀಡಿದಾಗಲೂ ಗೋವಾಕ್ಕೆ ತಪ್ಪದೆ ಬರುತ್ತೇನೆ. ಈ ಸಲ ನನ್ನ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಈ ವಿಷಯವನ್ನು ನನ್ನ ಪರಿಚಯದವರಿಗೆ ತಿಳಿಸಿದ್ದೆ. ಆಗ ಅವರು ಸುಳ್ಯದ ಕೆವಿಜಿ ಆಯುರ್ವೇದ ಆಸ್ಪತ್ರೆ ಬಗ್ಗೆ ನನಗೆ ತಿಳಿಸಿದರು. ಅಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆ ಎಂದರು. ಹೀಗಾಗಿ ನಾನು ಇಲ್ಲಿಗೆ ಬಂದು ದಾಖಲಾದೆ. ಇಲ್ಲಿ ದಾಖಲಾದ ನಿಮಗೆ ಯಾವ ರೀತಿಯ ಚಿಕಿತ್ಸೆ ಸಿಕ್ಕಿತು..? ನಿಮ್ಮ ಅನುಭವವನ್ನು ಹಂಚಿಕೊಳ್ಳುವಿರಾ..? -ಇಲ್ಲಿಗೆ ಬಂದು ದಾಖಲಾದ ಬಳಿಕ ನನಗೆ ಒಂದು ವಾರ ನಿರಂತರವಾಗಿ ಚಿಕಿತ್ಸೆ ನೀಡಿದರು. ಈಗ ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ. ಇಲ್ಲಿನ ವೈದ್ಯರು, ಸಿಬ್ಬಂದಿ ಅತ್ಯಂತ ಕಾಳಜಿಯಿಂದ ನನ್ನನ್ನು ನೋಡಿಕೊಂಡಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಕೆವಿಜಿ ಆಯುರ್ವೇದ ಆಸ್ಪತ್ರೆಯ ಚಿಕಿತ್ಸೆ ಇತರೆ ಕಡೆಗಳಿಗಿಂತ ಎಷ್ಟು ಭಿನ್ನವಾಗಿದೆ..? -ನಾನು ಹಲವಾರು ಆಯುರ್ವೇದ ಆಸ್ಪತ್ರೆಗಳನ್ನು ನೋಡಿದ್ದೇನೆ. ಆದರೆ ಕೆವಿಜಿ ಆಯುರ್ವೇದ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಅತ್ಯಂತ ಅಕ್ಕರೆಯಿಂದ ರೋಗಿಗಳನ್ನು ನೋಡಿಕೊಳ್ಳುತ್ತಾರೆ. ಇಂಗ್ಲಿಷ್ ಮದ್ದುಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡಿರುವ ಜನರಿರುವ ಈ ಕಾಲದಲ್ಲಿ ಆಯುರ್ವೇದ ಔಷಧಿಯ ಬಗ್ಗೆ ನಿಮಗೆ ಒಲವು ಮೂಡಿದ್ದು ಹೇಗೆ..? – ನನ್ನ ದೇಶ ಇಂಗ್ಲೆಂಡ್ ಸೇರಿದಂತೆ ವಿಶ್ವದ ಹಲವಾರು ರಾಷ್ಟ್ರಗಳು ಇಂಗ್ಲಿಷ್ ಔಷಧವನ್ನೇ ಹೆಚ್ಚಾಗಿ ನಂಬಿಕೊಂಡಿವೆ. ಆದರೆ ಭಾರತದಲ್ಲಿ ಆಯುರ್ವೇದ ಔಷಧಿಗಳಿಗಿರುವ ಮಹತ್ವವನ್ನು ನನ್ನ ಸ್ನೇಹಿತರಿಂದ ಹಾಗೂ ಪುಸ್ತಕಗಳನ್ನು ಓದುವುದರಿಂದ ತಿಳಿದುಕೊಂಡೆ. ಭಾರತದ ಮಣ್ಣಿನ ಯೋಗವನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ಕಳೆದ ೧೦ ವರ್ಷಗಳಿಂದ ನಾನು ಯೋಗವನ್ನು ಮಾಡುತ್ತಿದ್ದೇನೆ. ಮನುಷ್ಯನ ದೇಹ ಮತ್ತು ಪ್ರಕೃತಿಗೆ ನಿಕಟವಾದ ಸಂಪರ್ಕವಿದೆ. ಹಾಗೆ ನೋಡುವುದಾದರೆ ಮನುಷ್ಯನ ದೇಹವೇ ಒಂದು ಪ್ರಕೃತಿ. ಆ ಪ್ರಕೃತಿಯನ್ನು ನಾವು ಚೆನ್ನಾಗಿ ನೋಡಿಕೊಂಡು ಬದುಕಿದರೆ ಮಾತ್ರ ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಸುಳ್ಯಕ್ಕೆ ನೀವು ಬಂದ ಬಳಿಕ ಇಲ್ಲಿ ನಿಮಗೆ ಇಷ್ಟವಾಗಿದ್ದು ಯಾವುದು..? – ನನಗೆ ಇಲ್ಲಿನ ಖಾದ್ಯ ನೀರ್ ದೋಸೆ ಹಾಗೂ ತೆಂಗಿನ ಕಾಯಿ ಚಟ್ನಿ ನೆನಪಿಸಿಕೊಂಡರೆ ಬಾಯಲ್ಲಿ ನೀರು ಬರುತ್ತದೆ. ಅದನ್ನು ಅತ್ಯಂತ ಹೆಚ್ಚು ಇಷ್ಟ ಪಟ್ಟು ತಿಂದೆ. ಅಲ್ಲದೆ ಮಧ್ಯಾಹ್ನಕ್ಕೆ ಸವಿದ ಗಂಜಿ ಊಟ ಕೂಡ ಇಷ್ಟವಾಯಿತು. ಕರ್ನಾಟಕಕ್ಕೆ ಬಂದಿದ್ದೀರಿ, ಇಲ್ಲಿನ ಜನರಾಡುವ ಕನ್ನಡ ಭಾಷೆಯ ಬಗ್ಗೆ ನೀವು ಎಷ್ಟು ತಿಳಿದುಕೊಂಡಿದ್ದೀರಿ..? – ಕನ್ನಡದಲ್ಲಿ ನಾನು ‘ಬಿಸಿ’ ಅನ್ನುವ ಪದವನ್ನು ಕಲಿತುಕೊಂಡಿದ್ದೇನೆ. ಹಾಟ್ ವಾಟರ್ ಗೆ ಬಿಸಿ ನೀರು ಎಂದು ಹೇಳುವುದನ್ನು ನಾನು ಇಲ್ಲಿಗೆ ಬಂದ ನಂತರ ಕಲಿತೆ. ಇದು ಕನ್ನಡದಲ್ಲಿ ನಾನು ಕಲಿತ ಮೊದಲ ಪದ.
© 2021 Newsnotout | Website Developed By serverhug.
ನಮ್ಮ ವಾಟ್ಸಪ್ ಗ್ರೂಪ್ಗೆ ಸೇರಿ