ನ್ಯೂಸ್ ನಾಟೌಟ್ : ಎಂಥ ಕಾಲ ಬಂತು ನೋಡಿ..ಮೊನ್ನೆಯಷ್ಟೇ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗುವನ್ನು ಮನೆಯೊಳಗೆ ಕೂಡಿ ಹಾಕಿ ಕೆಲಸಕ್ಕೆ ಹೋಗಿದ್ದ ಮನಕಲಕುವ ಘಟನೆ ಬಗ್ಗೆ ವರದಿಯಾಗಿತ್ತು.ಇದೀಗ ಮತ್ತೊಂದು ಹೃದಯ ವಿದ್ರಾವಕ ಘಟನೆ ಬಗ್ಗೆ ವರದಿಯಾಗಿದೆ.
ಅಂಗಡಿಗೆ ಕೆಲಸಕ್ಕೆ ಸೇರಿದ್ದ ಯುವಕನೊಬ್ಬ ಮಾಲೀಕನ ಮೂರು ವರ್ಷದ ಮಗಳನ್ನು ಅಪಹರಿಸಿರುವ ಘಟನೆ ಬಸವನಗುಡಿ ಯಲ್ಲಿ ನಡೆದಿದೆ.ಈ ಸಂಬಂಧ ಬನಶಂಕರಿ ನಿವಾಸಿ, ಮಗುವಿನ ತಂದೆ ಶಫಿವುಲ್ಲಾ ಎಂಬವರು ಬನಶಂಕರಿ ಪೊಲೀಸ್ ಠಾಣೆಗೆ ವಾಸೀಂ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಮಗು ಪತ್ತೆಯಾಗಿದ್ದು, ತಾಯಿ ಬಳಿ ಇದೆ ಎಂಬುದು ಗೊತ್ತಾಗಿದೆ. ಕೌಟುಂಬಿಕ ವಿಚಾರವಾಗಿ ಮಗುವಿನ ತಾಯಿಯೇ ವಾಸೀಂ ಎಂಬಾತನ ಮೂಲಕ ಕರೆಸಿಕೊಂಡಿದ್ದಾಳೆ ಎಂಬುದು ಪತ್ತೆಯಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ನಗರದಲ್ಲಿ ಪೀಠೊಪಕರಣಗಳ ಅಂಗಡಿ ನಡೆಸುತ್ತಿರುವ ಶಫಿವುಲ್ಲಾ 2015ರಲ್ಲಿ ಮದುವೆಯಾಗಿದ್ದು, ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ಶಫಿವುಲ್ಲಾ ದಂಪತಿ ವೈಯಕ್ತಿಕ ಕಾರಣಗಳಿಗೆ 3 ವರ್ಷಗಳ ಹಿಂದೆ ವಿಚ್ಛೇದನ ಪಡೆದುಕೊಂಡಿದ್ದು, ಶಫಿವುಲ್ಲಾ ಮಗಳ ಜತೆ ಬನಶಂಕರಿಯಲ್ಲಿ ವಾಸವಾಗಿದ್ದಾರೆ ಹಾಗೂ ಪತ್ನಿ ಬೇರೆಡೆ ವಾಸವಾಗಿದ್ದಾರೆ.
ಈ ಮಧ್ಯೆ ಒಂದೂವರೆ ವರ್ಷಗಳ ಹಿಂದೆ ಶಫಿವುಲ್ಲಾ ಅವರ ಪೀಠೊಪಕರಣಗಳ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವಾಸೀಂ, ಕೆಲ ತಿಂಗಳಿಂದ ಕೆಲಸ ಬಿಟ್ಟಿದ್ದ. ಆದರೆ, ಕಳೆದ ಡಿ.28ರಂದು ಅಂಗಡಿ ಬಳಿ ಬಂದ ವಾಸೀಂ, ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಕೇಳಿದ್ದಾನೆ. ಅದಕ್ಕೆ ಒಪ್ಪಿದ ಶಫಿವುಲ್ಲಾ ಇಂದಿನಿಂದಲೇ ಕೆಲಸ ಮಾಡುವಂತೆ ಸೂಚಿಸಿ, ಹೊರಗಡೆ ಹೋಗಿದ್ದಾರೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ವಾಸೀಂ, ಶಫಿವುಲ್ಲಾರ ಮಗಳನ್ನು ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ, ವಾಸೀಂ, ಆ ಮಗುವನ್ನು ಶಫಿವುಲ್ಲಾರ ಮಾಜಿ ಪತ್ನಿಗೆ ಒಪ್ಪಿಸಿದ್ದಾನೆ ಎಂಬುದು ಗೊತ್ತಾಗಿದೆ. ಆಕೆಯನ್ನು ವಿಚಾರಣೆ ನಡೆಸಿದಾಗ ಮಗುವಿನ ಮೇಲೆ ತನಗೂ ಹಕ್ಕಿದೆ. ಹೀಗಾಗಿ ಆಕೆ ನನ್ನ ಬಳಿಯೇ ಇದ್ದಾಳೆ ಎಂದು ಹೇಳಿಕೆ ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.