ನ್ಯೂಸ್ ನಾಟೌಟ್ : ನಟಿ ಪ್ರಿಯಾಮಣಿಯವರು ದೇಗುಲವೊಂದಕ್ಕೆ ಭಕ್ತಿಯಿಂದ ಯಾಂತ್ರಿಕ ಆನೆಯೊಂದನ್ನು ಕೊಡುಗೆ ನೀಡಿದ್ದಾರೆ. ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ (PETA) ಎನ್ಜಿಒ ಜತೆ ಸೇರಿಕೊಂಡು ಬಹುಭಾಷ ನಟಿ ಈ ಕೆಲಸ ಮಾಡಿದ್ದಾರೆ. ಕೊಚ್ಚಿಯಲ್ಲಿರುವ ಥ್ರಿಕ್ಕಾಯಿಲ್ ಮಹಾದೇವ ದೇವಸ್ಥಾನಕ್ಕೆ ಈ ಕೊಡುಗೆ ನೀಡಿದ್ದು ಇದನ್ನು ನೋಡಿ ಭಕ್ತರು ಸಂತಸಗೊಂಡಿದ್ದಾರೆ.
ಜೀವಂತ ಆನೆಗಳನ್ನು ಎಂದಿಗೂ ಹೊಂದಬಾರದು ಅಥವಾ ಬಾಡಿಗೆಗೆ ತೆಗೆದುಕೊಳ್ಳಬಾರದು ಎಂದು ದೇವಾಲಯದ ಆಡಳಿತ ಮಂಡಳಿ ನಿರ್ಧಾರ ಮಾಡಿರುವ ಹಿನ್ನೆಲೆಯಲ್ಲಿ ಪ್ರಿಯಾಮಣಿ ಅವರು ಯಾಂತ್ರಿಕ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.ಮೆಕಾನಿಕಲ್ ಆನೆಗೆ ಮಹಾದೇವನ್ ಎಂದು ಹೆಸರಿಡಲಾಗಿದೆ. ಸುರಕ್ಷಿತ ಮತ್ತು ಕ್ರೌರ್ಯ ಮುಕ್ತ ರೀತಿಯಲ್ಲಿ ದೇವಸ್ಥಾನದಲ್ಲಿ ಸಮಾರಂಭಗಳನ್ನು ನಡೆಸಲು ಈ ಯಾಂತ್ರಿಕ ಆನೆಯನ್ನು ಬಳಸಲಾಗುತ್ತದೆ ಎಂದು PETA ತಿಳಿಸಿದೆ. ಈ ರೀತಿಯ ಯಾಂತ್ರಿಕ ಆನೆಯನ್ನು ಕೇರಳದಲ್ಲಿ ಪರಿಚಯಿಸಿದ್ದು, ಇದು ಎರಡನೇ ಬಾರಿ. ದೇವಸ್ಥಾನದಲ್ಲಿ ಭಾನುವಾರ ಉದ್ಘಾಟನಾ ಸಮಾರಂಭ ನಡೆಯಿತು. ಈ ವೇಳೆ ಮಾಸ್ಟರ್ ವೇದಾರ್ಥ್ ರಾಮನ್ ಮತ್ತು ತಂಡದವರಿಂದ ಚೆಂಡ ಮೇಳ ಹಾಗೂ ವೇಣು ಮಾರಾರ್ ಮತ್ತು ತಂಡದವರಿಂದ ಪಂಚವಾದ್ಯ ನಡೆಯಿತು.
ಕಳೆದ ವರ್ಷ ತ್ರಿಶೂರ್ ಜಿಲ್ಲೆಯ ಇರಿಂಜದಪ್ಪಿಲ್ಲಿ ಶ್ರೀಕೃಷ್ಣ ದೇವಸ್ಥಾನದ ಅಧಿಕಾರಿಗಳು, ಯಾವುದೇ ಹಬ್ಬಗಳಿಗೆ ಜೀವಂತ ಪ್ರಾಣಿಗಳನ್ನು ಬಳಸುವುದನ್ನು ನಿಲ್ಲಿಸುವ ಪ್ರತಿಜ್ಞೆಯ ಭಾಗವಾಗಿ, ದೇವಾಲಯದ ಆಚರಣೆಗಳಿಗೆ ರೋಬೋಟಿಕ್ ಆನೆಯನ್ನು ಪರಿಚಯಿಸಿದರು. ಇದು ಕೇರಳದಲ್ಲಿ ಮೊದಲನೆಯದು.