ನ್ಯೂಸ್ ನಾಟೌಟ್: ಲೋ ಬಿಪಿಯಾದ ಪರಿಣಾಮ ಚಲಿಸುತ್ತಿದ್ದ ಆಟೋರಿಕ್ಷಾ ಪಲ್ಟಿಯಾಗಿ ಚಾಲಕ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯದಲ್ಲಿ ಭಾನುವಾರ (ಮಾ.3ರಂದು) ರಾತ್ರಿ ಸಂಭವಿಸಿದೆ.ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಿವೇಕಾನಂದ ದೇವರಗದ್ದೆ ಮೃತರು ಎಂದು ತಿಳಿದು ಬಂದಿದೆ.
ವಿವೇಕಾನಂದ ಅವರು ಮಾ.3 ರಾತ್ರಿ ಗಂಟೆ 9 ಗಂಟೆ ಸುಮಾರಿಗೆ ಸುಬ್ರಹ್ಮಣ್ಯದ ಇಂಜಾಡಿ ಬಳಿ ಆಟೋದಲ್ಲಿ ಹೋಗುತ್ತಿದ್ದರು. ಈ ವೇಳೆ ಅವರಿಗೆ ಲೋ ಬಿ.ಪಿ ಆಗಿದೆ.ಪರಿಣಾಮ ರಿಕ್ಷಾ ರಸ್ತೆ ಬದಿ ಚಲಿಸಿ ಪಲ್ಟಿಯಾಗಿ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆ ಸಾಗಿಸುವಾಗಲೇ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ವಿವೇಕಾನಂದ ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿದ್ದರೆ ಅವರು ಬದುಕುತ್ತಿದ್ದರು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.ಅವರನ್ನು ಸುಬ್ರಹ್ಮಣ್ಯದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರೂ ಅಲ್ಲಿ ವೈದ್ಯರಿಲ್ಲದೆ ಚಿಕಿತ್ಸೆ ಸಿಗಲಿಲ್ಲ. ಸುಬ್ರಹ್ಮಣ್ಯದಲ್ಲಿ ಎಲ್ಲವೂ ಇದೆ.ಆದರೆ ಇಂತಹ ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಅಥವಾ ಗಾಯಾಳುಗಳಿಗೆ,ಗರ್ಭಿಣಿಯರಿಗೆ ಚಿಕಿತ್ಸೆ ಬೇಕೆಂದರೆ ಇಲ್ಲಿ 24X7 ಆಸ್ಪತ್ರೆಗಳೇ ಇಲ್ಲದಿರೋದು ವಿಪರ್ಯಾಸವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ವಿವೇಕಾನಂದರಿಗೆ ಸುಬ್ರಹ್ಮಣ್ಯದಲ್ಲಿ ಚಿಕಿತ್ಸೆ ಸಿಗದ ಪರಿಣಾಮ ಅವರನ್ನು ಕಡಬದ ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ಅವರು ಮೃತರಾಗಿದ್ದರು.ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ 24X7 ಆಸ್ಪತ್ರೆ ಇಲ್ಲದೇ ಸಮರ್ಪಕ ಚಿಕಿತ್ಸೆ ಸಿಗದೇ ಸಾವನ್ನಪ್ಪುವ ಘಟನೆಗಳು ಆಗಾಗ ನಡೆಯುತ್ತಲೇ ಇದ್ದು ಇದರ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ. ಸುಬ್ರಹ್ಮಣ್ಯದಲ್ಲಿ ಸುಸಜ್ಜಿತ ಆಸ್ಪತ್ರೆ ಆರಂಭಿಸುವಂತೆ ಒತ್ತಾಯಿಸಿದ್ದಾರೆ.ಈ ಬಗೆಗಿನ ಪೋಸ್ಟ್ವೊಂದು ವಾಟ್ಸಾಪ್ ಗ್ರೂಪ್ಗಳಲ್ಲಿ ಭಾರಿ ವೈರಲ್ ಆಗುತ್ತಿದೆ.