ನ್ಯೂಸ್ ನಾಟೌಟ್: ಭೂಮಿ ಅಗೆಯುತ್ತಿರುವ ವೇಳೆ ಸುರಂಗ ಮಾದರಿಯ ಗುಹೆಯೊಂದು ಪತ್ತೆಯಾಗಿದ್ದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಸುಳ್ಯದ ಕಲ್ಮಕಾರಿನ ಬಿಳಿಮಲೆಯ ಉಮೇಶ್ ಎಂಬುವವರಿಗೆ ಸೇರಿದ ಜಮೀನಿನ ರಬ್ಬರ್ ತೋಟದಲ್ಲಿ ಜೆಸಿಬಿ ಮೂಲಕ ಕೆಲಸ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಗುಹೆ ಪತ್ತೆಯಾಗಿದೆ.
ಉಮೇಶ್ ಎನ್ನುವವರ ರಬ್ಬರ್ ತೋಟದಲ್ಲಿ ಅರಣ್ಯ ಕೃಷಿ ಉದ್ದೇಶದಿಂದ ಜೆಸಿಬಿಯಲ್ಲಿ ಮಣ್ಣು ತೆಗೆಯುವ ಕೆಲಸವನ್ನು ಆರಂಭಿಸಿದ್ದರು. ಪೊದೆ, ಮುಳ್ಳುಗಳಿಂದ ಕೂಡಿದ್ದ ಆ ಜಾಗದಲ್ಲಿ ಅಗೆತ ವೇಳೆ ಮುಚ್ಚಳದ ಮಾದರಿ ಪತ್ತೆಯಾಗಿದ್ದು, ಅದನ್ನು ತೆಗೆದಾಗ ಸುರಂಗ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಒಳಭಾಗ ದೊಡ್ಡ ಗಾತ್ರದ ಸ್ನಾನದ ಹಂಡೆ ಮಾದರಿಯಲ್ಲಿದೆ, ಸುಮಾರು 6 ಅಡಿ ಆಳವಿದೆ ಎನ್ನಲಾಗಿದೆ.ಸೂಕ್ಷ್ಮವಾಗಿ ಗಮನಿಸಿದಾಗ ಕೆತ್ತನೆ ಮೂಲಕ ನಿರ್ಮಿಸಿರುವುದು ಕಂಡುಬಂದಿದೆ. ಹಿಂದಿನ ಕಾಲದಲ್ಲಿ ಅಡಗು ತಾಣವಾಗಿ ಬಳಸಲು ಇದನ್ನು ನಿರ್ಮಿಸಿರಬಹುದು ಎಂದು ಶಂಕಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಚ್ಚರಿಯ ಘಟನೆ ಬಗ್ಗೆ ವರದಿಯಾಗಿದ್ದು ಇದು ಮೊದಲೇನಲ್ಲ . ಈ ಹಿಂದೆ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕಲ್ಲೆಂಬಿ ಎಂಬಲ್ಲಿ ಗುಡ್ಡದಲ್ಲಿ ಗುಂಡಿ ತೆಗೆಯುವ ವೇಳೆ ಗುಹೆಯೊಂದು ಪತ್ತೆಯಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಮಾತ್ರವಲ್ಲ ಪ್ರಾಚೀನ ಮಣ್ಣಿನ ಪರಿಕರಗಳು ಕೂಡ ಪತ್ತೆಯಾಗಿತ್ತು. ಕಲ್ಲೆಂಬಿ ವಿಶ್ವನಾಥ ಗೌಡ ಅವರ ಅಡಿಕೆ ತೋಟ ಮಾಡುವ ಉದ್ದೇಶದಿಂದ ಗುಂಡಿ ತೆಗೆಯುವಾಗ ಈ ಗುಹೆ ಪತ್ತೆಯಾಗಿತ್ತು. ಸೂಕ್ಷ್ಮವಾಗಿ ಗಮನಿಸಿದಾಗ ಮಣ್ಣಿನ ಮಡಿಕೆ,ಬಟ್ಟಲು,ಸಣ್ಣ-ಪುಟ್ಟ ಪಾತ್ರೆಗಳ ಅವಶೇಷಗಳು ಪತ್ತೆಯಾಗಿದ್ದವು.