ನ್ಯೂಸ್ ನಾಟೌಟ್: ದೇವಸ್ಥಾನದ ಪಾವಿತ್ರ್ಯವನ್ನು ಕಾಪಾಡಲು ದೇವಸ್ಥಾನದ ಪರಿಸರದಲ್ಲಿ ಯಾವುದೇ ಕಾರಣಕ್ಕೂ ಹಿಂದುಯೇತರರಿಗೆ, ನಾಸ್ತಿಕರಿಗೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ನಿರಾಕರಿಸಿ ಧರ್ಮದಾಯ ಅಧಿನಿಯಮ ಕಾಯಿದೆಯ ಕಲಂ 29 ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ನೀಡಲಾಯಿತು.
ಬೆಂಗಳೂರಿನಲ್ಲಿ ಮಹಾಸಂಘದ ರಾಜ್ಯ ಸಂಯೋಜಕ ಮೋಹನ್ ಗೌಡ ಮಾತನಾಡಿ, ಹಿಂದೂ ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಶ್ರದ್ಧಾ ಕೇಂದ್ರ. ದೇವಸ್ಥಾನಗಳಿಗೆ ಅದರದ್ದೇ ಆದ ವಿಶೇಷವಾದ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆ ಮತ್ತು ಮಹತ್ವವಿದೆ. ದೇವಸ್ಥಾನಗಳಲ್ಲಿ ಪ್ರತಿನಿತ್ಯ ನಡೆಯುವ ಪೂಜೆ, ಅರ್ಚನೆ, ಹೋಮ-ಹವನ ಮುಂತಾದ ಧಾರ್ಮಿಕ ವಿಧಿಗಳಿಂದ ದೇವಸ್ಥಾನದಲ್ಲಿ, ದೇವತೆಗಳ ಸ್ಥಾನದಲ್ಲಿ ಸಾತ್ವಿಕತೆ ನಿರ್ಮಾಣವಾಗಿರುತ್ತದೆ. ಅದರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ಭಕ್ತ, ವಿಶ್ವಸ್ಥರ ಕರ್ತವ್ಯ.
ಇದರ ಸಂರಕ್ಷಣೆಗಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ಅಧಿನಿಯಮ 1997ರ ಕಾಯಿದೆಗೆ 2002ರಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದರು. ಈಗ ಮಾರ್ಚ್, ಏಪ್ರಿಲ್ನಲ್ಲಿ ಬಹುತೇಕ ಎಲ್ಲ ದೇವಸ್ಥಾನಗಳ ವಾರ್ಷಿಕ ಜಾತ್ರೆಯು ಪ್ರಾರಂಭವಾಗುತ್ತಿದೆ. ಉದಾ: ಬೆಂಗಳೂರು ಕರಗ, ಬನ್ನೇರುಘಟ್ಟ ರಸ್ತೆಯಲ್ಲಿನ ಚಂಪಕ ರಾಮ ದೇವಸ್ಥಾನ ಜಾತ್ರೆ. ಈ ವಾರ್ಷಿಕ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೊಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುತ್ತದೆ. ಇದರ ದುರುಪಯೋಗವನ್ನು ಪಡೆಯಲು ಅನ್ಯ ಸಮುದಾಯದವರು, ದೇವರ ಮೇಲೆ ನಂಬಿಕೆ ಇಲ್ಲದ ನಾಸ್ತಿಕರು ದೇವಸ್ಥಾನದ ಪ್ರಾಂಗಣ, ಪರಿಸರದಲ್ಲಿ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ವ್ಯಾಪಾರ ಮಾಡುವುದು ಗಮನಕ್ಕೆ ಬರುತ್ತದೆ. ಇದರಿಂದ ದೇವಸ್ಥಾನದ ಸಾತ್ತ್ವಿಕ ವಾತಾವರಣವು ಹಾಳಾಗುತ್ತದೆ ಎಂದು ದೂರಲಾಗಿದೆ.