ನ್ಯೂಸ್ ನಾಟೌಟ್: ಲೋಕಸಭಾ ಚುನಾವಣಾ ಕಾವು ರಂಗೇರುತ್ತಿದೆ.ಕೆಲವೊಂದು ಕಡೆಗಳಿ ಅಭ್ಯರ್ಥಿಗಳ ಘೋಷಣೆಯೂ ಆಗಿದೆ. ಈ ಪೈಕಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿರುವ ಗೀತಾ ಶಿವರಾಜ್ಕುಮಾರ್ (Geetha Shivarajkumar) ಶಿವಮೊಗ್ಗದಲ್ಲಿ (Shivamogga) ಅಖಾಡಕ್ಕೆ ಇಳೀತಿದ್ದಾರೆ. ಪ್ರಚಾರಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿರುವ ಗೀತಾ ಶಿವರಾಜ್ಕುಮಾರ್, ಈ ಬಾರಿ ಗೆದ್ದೆ ಗೆಲ್ಲುವುದಾಗಿ ಹೇಳಿದ್ದಾರೆ.
ಇತ್ತ ಗೀತಾ ಶಿವರಾಜ್ ಕುಮಾರ್ ಪರವಾಗಿ ಶಿವಣ್ಣ ಪ್ರಚಾರ ಮಾಡಲಿದ್ದಾರೆ. ಈ ಬಗ್ಗೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಅವರು ಮಾತನಾಡಿದ್ದು,ರಾಜಕಾರಣ ಹೇಗೆ ನಡೆಯುತ್ತಿದೆ ಎನ್ನುವ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ‘ಶಿವಮೊಗ್ಗ ಹೋಗುವುದು ಗೆಲ್ಲಿಸಿಕೊಂಡು ಬರೋದು ಅಷ್ಟೇ. ನಾನು ಶಿವಮೊಗ್ಗದಲ್ಲಿ ಗೀತಾ ಪರ ಪ್ರಚಾರ ಮಾಡುತ್ತೇನೆ’ ಎಂದಿದ್ದಾರೆ .
ಈ ಕುರಿತಂತೆ ಮಾತನಾಡಿರುವ ಗೀತಾ ಶಿವರಾಜ್ ಕುಮಾರ್ “ನನಗೆ ಶಿವಮೊಗ್ಗ ಹೊಸದಲ್ಲ. ಮೊದಲಿನಿಂದಲೂ ನಾನು ಶಿವಮೊಗ್ಗಕ್ಕೆ ಹೋಗ್ತಾ ಇದ್ದೀನಿ. ಅಲ್ಲಿ ಯಾರೂ ಹೊಸಬರು ಇಲ್ಲ, ಎಲ್ಲಾ ನಮಗೆ ಗೊತ್ತಿರುವವರೆ. ನಾನು ಗೆಲ್ತೀನಿ ಅನ್ನೋ ಭರವಸೆ ಇದೆ. ಮಧು ಕೂಡ ತುಂಬಾ ಚೆನ್ನಾಗಿ ಕೆಲಸಗಳನ್ನು ಮಾಡ್ತಾ ಇದ್ದಾನೆ. ಅವನಿಗೆ ಎಷ್ಟೇ ಕೆಲಸ ಇದ್ದರೂ ಮಾಡ್ತಾನೆ ಎಂದು ಹೇಳಿದ್ರು.
ಮಾತು ಮುಂದುವರೆಸಿದ ಗೀತಾ , ನಮ್ಮ ತಂದೆ ಏನು ಕೆಲಸ ಮಾಡಿಕೊಂಡು ಬಂದಿದ್ರು ಅದನ್ನೆಲ್ಲಾ ನಾನು ನೋಡಿದ್ದೇನೆ. ನಾನು ಎರಡು ವರ್ಷದವಳಾಗಿದ್ದಾಗ ಅವರು ಎಂಎಲ್ಎ ಆಗಿದ್ರು. ರಸ್ತೆಯಲ್ಲಿ ಯಾರೇ ಹೋಗ್ತಾ ಇದ್ರು ಮಾತನಾಡಿಸ್ತಾ ಇದ್ರು. ಅಷ್ಟು ಸಿಂಪ್ಲಿಸಿಟಿ ಮನುಷ್ಯ ಅವರು. ಅವರನ್ನು ನೋಡಿಕೊಂಡು ಬೆಳೆದಿದ್ದೇವೆ. ನಮ್ಮ ತಂದೆ ಯಾವಾಗಲೂ ನಮ್ಮ ಒಳಗೆ ಇರ್ತಾರೆ ಎಂದು ಗೀತಾ ಶಿವರಾಜ್ಕುಮಾರ್ ತಂದೆ ಬಂಗಾರಪ್ಪ ಅವರನ್ನು ನೆನೆದು ಭಾವುಕರಾದರು.