ನ್ಯೂಸ್ ನಾಟೌಟ್: ತೋಟದ ಮನೆಯೊಂದರಲ್ಲಿ 30ಕ್ಕೂ ಅಧಿಕ ಮಾನವ ತಲೆಬುರುಡೆಗಳು ಪತ್ತೆಯಾಗಿವೆ. ರಾಮನಗರ ಜಿಲ್ಲೆ ಬಿಡದಿಯಲ್ಲಿ ಹಿರಿಯರಿಂದ ಹಿಡಿದು ಪುಟ್ಟ ಪುಟ್ಟ ಮಕ್ಕಳ ವರೆಗಿನ ನಾನಾ ಬಗೆಯ ತಲೆಬುರುಡೆಗಳು ಪತ್ತೆಯಾಗಿ ಭಾರಿ ಆತಂಕಕ್ಕೆ ಕಾರಣವಾಗಿದೆ. ಇದನ್ನು ಒಬ್ಬನೇ ವ್ಯಕ್ತಿ ತೆಗೆದಿಟ್ಟುಕೊಂಡಿದ್ದಾನೆ. ಹಾಗಿದ್ದರೆ ಈ ತಲೆಬುರುಡೆಗಳ ರಹಸ್ಯವೇನು?
ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ತಲೆಬುರುಡೆಗಳು ಪತ್ತೆಯಾಗಿವೆ. ಬಲರಾಮ್ ಎಂಬಾತನಿಗೆ ಸೇರಿದ ಈ ತೋಟದ ಮನೆಯಲ್ಲಿ ಪತ್ತೆಯಾಗಿರುವ ತಲೆಬುರುಡೆಗಳನ್ನು ಒಂದೇ ಕೋಣೆಯಲ್ಲಿ ಸಂಗ್ರಹಿಸಿ ಇಡಲಾಗಿದ್ದು, ಇದರ ಹಿನ್ನೆಲೆ ಬೆಚ್ಚಿ ಬೀಳಿಸುವಂತಿದೆ. ತೋಟದ ಮನೆಯಲ್ಲಿರುವ ಈ ತಲೆ ಬುರುಡೆಗಳಿಗೆ ನಿತ್ಯ ಪೂಜೆ ಮಾಡಲಾಗುತ್ತದೆ. ಈ ಮೂಲಕ ಬಲರಾಮ ಕಂಡ ಕಂಡವರ ಮೇಲೆ ಮಾಟ ಮಂತ್ರ ಮಾಡುತ್ತಾನೆ ಎಂದು ಆರೋಪಿಸಲಾಗಿದೆ. ಗ್ರಾಮಸ್ಥರು ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂಧಿಸಿದ್ದಾರೆ.
ಬಲರಾಮ ಈ ತಲೆಬುರುಡೆಗಳನ್ನು ಎಲ್ಲಿಂದ ತರುತ್ತಾನೆ? ಆತನೇ ಕೊಲೆ ಮಾಡಿ ತಲೆಬುರುಡೆ ಸಂಗ್ರಹ ಮಾಡಿದ್ದಾನೆ ಎಂಬ ಸಂಶಯಗಳು ಸಾರ್ವಜನಿಕರಿಗೆ ಇದೆ. ಪೊಲೀಸರು ಈ ಬಗ್ಗೆ ಬಲರಾಮನನ್ನು ವಿಚಾರಿಸಿದಾಗ, ಇದು ಆತ ಸ್ಮಶಾನದಿಂದ ಸಂಗ್ರಹಿಸಿದ ತಲೆಬುರುಡೆ ಎಂದು ತಿಳಿದುಬಂದಿದೆ. ಬಲರಾಮ ರಾತ್ರಿ ವೇಳೆ ಸ್ಮಶಾನದಲ್ಲಿ ಪೂಜೆ ಮಾಡುತ್ತಾನೆ. ಅಲ್ಲಿ ದಹನ ಮಾಡುವ ಸಂದರ್ಭದಲ್ಲಿ ಹಾಗೇ ಉಳಿದ ತಲೆ ಬುರುಡೆಗಳನ್ನು ಸಂಗ್ರಹ ಮಾಡುತ್ತಾನೆ ಎಂದು ತಿಳಿದುಬಂದಿದೆ. ಈತ ಮಧ್ಯರಾತ್ರಿಯ ಬಳಿಕ ಸ್ಮಶಾನಕ್ಕೆ ಹೋಗಿ ಪೂಜೆ ಮಾಡುವುದನ್ನು ನೋಡಿದ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಅವರ ಮಾಹಿತಿಯಂತೆ ಪೊಲೀಸರು ಸ್ಮಶಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಪೊಲೀಸರು ಅಲ್ಲಿಗೆ ಹೋದಾಗ ಆತ ಪೂಜೆಯಲ್ಲಿ ನಿರತನಾಗಿದ್ದ. ಬಳಿಕ ಆತನನ್ನು ಠಾಣೆಗೆ ಕರೆಸಿ ಪ್ರಕರಣ ದಾಖಲಿಸಲಾಯಿತು.