ನ್ಯೂಸ್ ನಾಟೌಟ್: ಅನೇಕರಿಗೆ ಒಂದು ಅಭ್ಯಾಸವಿದೆ. ಯಾವುದೇ ತಿಂಡಿಯಿರಲಿ ಅದ್ರಲ್ಲೂ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಪೇಪರ್ ನಲ್ಲಿ ಸುತ್ತಿಕೊಂಡು ಮನೆ ಕಡೆ ಹೆಜ್ಜೆಯಿಡುತ್ತಾರೆ.ಸಾಮಾನ್ಯವಾಗಿ ರಸ್ತೆ ಬದಿಯ ಅಂಗಡಿಗಳಲ್ಲಿ ತಿಂಡಿ ಅಥವಾ ಇತರ ಆಹಾರಗಳನ್ನು ಮಾರುವವರು ಅವುಗಳನ್ನು ಪೇಪರ್ಗಳಲ್ಲಿ ಹಾಕಿಕೊಡುತ್ತಾರೆ. ಅಲ್ಲದೆ, ಪೇಪರ್ನಲ್ಲಿಯೇ ಪ್ಯಾಕಿಂಗ್ ಮಾಡುತ್ತಾರೆ. ಆದರೆ, ಪೇಪರ್ನಲ್ಲಿ ಪ್ಯಾಕ್ ಮಾಡಿದ ಬಿಸಿ ಬಿಸಿ ಬಜ್ಜಿ ಆಗಿರಬಹುದು, ಬೋಂಡಾ ಆಗಿರಬಹುದು ಮುಂತಾದ ತಿನಿಸುಗಳನ್ನು ತಿನ್ನುವುದು ಎಷ್ಟು ಅಪಾಯಕಾರಿ ಗೊತ್ತಾ?
ಇದು ಕೇವಲ ಅಂಗಡಿಗಳಿಗೆ ಸೀಮಿತವಾಗಿಲ್ಲ,ಕೆಲವೊಮ್ಮ ಮನೆಗಳಲ್ಲಿಯೂ ಕೆಲವು ಮಹಿಳೆಯರು ಎಣ್ಣೆಯಲ್ಲಿ ಕರಿದ ತಿಂಡಿ, ತಿನಿಸುಗಳನ್ನು ಪೇಪರ್ ಮೇಲೆ ಇಡುತ್ತಾರೆ. ಏಕೆಂದರೆ, ಎಣ್ಣೆ ಹೀರಿಕೊಳ್ಳಲಿ ಎಂದು. ಆದರೆ, ಇದು ತುಂಬಾ ಅಪಾಯಕಾರಿ. ಬಿಸಿಯಾದ ಆಹಾರ ಅಥವಾ ತಣ್ಣಗಾದ ಆಹಾರವನ್ನು ಪೇಪರ್ಗಳಲ್ಲಿ ಸುತ್ತಿಟ್ಟು ತಿನ್ನುವುದು ತುಂಬಾ ಅಪಾಯಕಾರಿ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ) ಎಚ್ಚರಿಸಿದೆ.
ಹಾಗಾದರೆ ಅದರಲ್ಲಿ ಅಂಥದ್ದೇನಿದೆ?ಪೇಪರ್ಗಳಲ್ಲಿ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದು ಅನಾರೋಗ್ಯವನ್ನು ಖರೀದಿಸಿದಂತೆ ಎಂದು FSSAI ಬಹಿರಂಗಪಡಿಸಿದೆ. ಪೇಪರ್ಗಳಲ್ಲಿ ಬಳಸುವ ಪ್ರಿಂಟಿಂಗ್ ಇಂಕ್ ಹಾನಿಕಾರಕ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ ಮತ್ತು ಅವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ. ದೇಶಾದ್ಯಂತ ಆಹಾರ ಮಾರಾಟಗಾರರು ಪದಾರ್ಥಗಳನ್ನು ಪ್ಯಾಕಿಂಗ್ ಮಾಡಲು ಪೇಪರ್ಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಇಂತಹ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಎಫ್ಎಸ್ಎಸ್ಎಐ ವರ್ತಕರಿಗೆ ಸೂಚಿಸಿದೆ.
ಯಾವುದೇ ಸಂದರ್ಭದಲ್ಲೂ ಆಹಾರ ಪ್ಯಾಕ್ ಮಾಡಲು ಪೇಪರ್ಗಳನ್ನು ಬಳಸಬಾರದು ಎಂದು ಎಚ್ಚರಿಸಿದೆ. ಪೇಪರ್ಗಳ ಮುದ್ರಣಕ್ಕೆ ಬಳಸುವ ಶಾಯಿ ದೇಹಕ್ಕೆ ಹೋದರೆ ಹೆಚ್ಚು ಅಪಾಯಕಾರಿ ಮತ್ತು ಆಹಾರದೊಂದಿಗೆ ಬೆರೆತರೆ ಆಹಾರವನ್ನು ಕಲುಷಿತಗೊಳಿಸುತ್ತದೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ರಿಂಟಿಂಗ್ ಇಂಕ್ನಲ್ಲಿ ಸೀಸ, ಹೆವಿ ಲೋಹಗಳು ಹಾಗೂ ಹಲವು ರಾಸಾಯನಿಕಗಳು ಆಹಾರದ ಜೊತೆಗೆ ದೇಹಕ್ಕೆ ಹೋದರೆ ತುಂಬಾ ಅಪಾಯಕಾರಿ ಎಂಬ ಅಂಶ ಬಹಿರಂಗವಾಗಿದೆ. ಈ ಇಂಕ್ನಲ್ಲಿರುವ ರಾಸಾಯನಿಕವು ಆಹಾರದಲ್ಲಿ ಸುಲಭವಾಗಿ ಹೀರಲ್ಪಡುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಇದು ತಕ್ಷಣದಲ್ಲಿ ಪರಿಣಾಮ ಬೀರದಿದ್ದರೂ ಭವಿಷ್ಯದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಿಳಿದುಬಂದಿದೆ.ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಕಾರ ಆಹಾರ ಪದಾರ್ಥಗಳನ್ನು ಸಂಗ್ರಹಿಸಲು ಅಥವಾ ಪ್ಯಾಕಿಂಗ್ ಮಾಡಲು ಪತ್ರಿಕೆಗಳು ಅಥವಾ ಇತರ ಮುದ್ರಣ ಕಾಗದಗಳನ್ನು ಬಳಸದಂತೆ ಎಚ್ಚರಿಸಿದೆ.