ನ್ಯೂಸ್ ನಾಟೌಟ್: ಕೆನರಾ ಬ್ಯಾಂಕ್ ಸಿಬ್ಬಂದಿ ಕೊರತೆಯಿಂದ ಸಂಪಾಜೆ ಸೇರಿದಂತೆ ಸುತ್ತಮುತ್ತಲಿನ ನಾಲ್ಕು ಗ್ರಾಮಸ್ಥರಿಗೆ ಆಗಿರುವ ಸಮಸ್ಯೆಗಳ ಕುರಿತು ನ್ಯೂಸ್ ನಾಟೌಟ್ ನಲ್ಲಿ ವರದಿ ಪ್ರಕಟಿಸಿರುವ ಮರುದಿನವೇ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ತುರ್ತು ಸಾಮಾನ್ಯ ಸಭೆ ಏರ್ಪಡಿಸಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
“ಸಂಪಾಜೆ ಸೇರಿದಂತೆ ನಾಲ್ಕು ಗ್ರಾಮಕ್ಕೆ ಒಂದೇ ಬ್ಯಾಂಕ್..! ಸಾವಿರಾರು ಗ್ರಾಹಕರಿಗೆ ಇಬ್ಬರೇ ಸಿಬ್ಬಂದಿ..! ಆಟಕ್ಕುಂಟು ಲೆಕ್ಕಕ್ಕಿಲ್ಲದ ಕೆನರಾ ಬ್ಯಾಂಕ್..!” ಎಂಬ ಶೀರ್ಷಿಕೆಯಡಿಯಲ್ಲಿ ಸೋಮವಾರ ನ್ಯೂಸ್ ನಾಟೌಟ್ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಕಟಗೊಂಡ ಮರುದಿನವೇ ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ತುರ್ತು ಸಾಮಾನ್ಯ ಸಭೆ ಏರ್ಪಡಿಸಲಾಯಿತು. ಸದ್ಯದ ಸಮಸ್ಯೆಗಳ ಕುರಿತು ಬಿಸಿಬಿಸಿ ಚರ್ಚೆ ನಡೆಯಿತು. ಜಿ.ಕೆ ಹಮೀದ್ , ರಜನಿ ಶರತ್ ಅವರು ಸಂಪಾಜೆಯ ಕೆನರಾ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಬ್ಯಾಂಕಿಂಗ್ ಸೇವೆಗೆಂದು ಬರುತ್ತಿರುವ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದರು.
ಈ ವೇಳೆ ಮಾ.21 ಒಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮಾ.22ರಂದು ಕೆನರಾ ಬ್ಯಾಂಕ್ ಮುಂದೆ ಧರಣಿ ನಡೆಸುವುದಕ್ಕೆ ನಿರ್ಣಯಿಸಲಾಗಿದೆ. ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್ .ಕೆ ಹನೀಫ್, ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ, ಅಬೂಸಾಲಿ ಮತ್ತಿತರರು ಉಪಸ್ಥಿತರಿದ್ದರು.