ನ್ಯೂಸ್ ನಾಟೌಟ್: ಕಾಡಾನೆ ದಾಳಿಯಿಂದ ಕೂಲಿಕಾರ್ಮಿಕ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಹಾಸನದ ಸಕಲೇಶಪುರ ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ನಡೆದಿದೆ, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೆಸಗುಲಿ ಗ್ರಾಮದ ಪಿಂಟು ಎಸ್ಟೇಟ್ನ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೂಲಿ ಕಾರ್ಮಿಕರ ಗಮನಕ್ಕೆ ಬಾರದಂತೆ ಸಮೀಪಿಸಿದ ಆನೆ, ಏಕಾಏಕಿ ದಾಳಿ ನಡೆಸಿದೆ. ತಕ್ಷಣ ಎಚ್ಚೆತ್ತ ಕೆಲಸಗಾರರು ಓಡಿದ್ದಾರೆ.
ಅವರಲ್ಲಿ ಒಬ್ಬನ ಬೆನ್ನು ಹತ್ತಿದ ಆನೆ ಸೊಂಡಲು ಬೀಸಿದ್ದು, ಒಬ್ಬ ಕಾರ್ಮಿಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ನಂತರ ಇನ್ನೊಬ್ಬನ ಮೇಲೆ ದಾಳಿ ಮಾಡಿದ ಆನೆ ಆತನನ್ನು ಅಟ್ಟಿಸಿಕೊಂಡು ಹೋಗಿದೆ. ಆತ ಓಡಿ ಮನೆಯೊಳಗೆ ಹೋಗಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ್ದಾನೆ.
ಆದರೆ ಮನೆಗೆ ಬೀಗ ಹಾಕಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಕೆಳಗೆ ಮಲಗಿ ಪಾರಾಗಿದ್ದಾನೆ ಎಂದು ವರದಿ ತಿಳಿಸಿದೆ. ಇದೇ ಆನೆ ಜ.4 ರಂದು ಬೇಲೂರು ತಾಲ್ಲೂಕಿನ ಮತ್ತಾವರದಲ್ಲಿ ವಂಸತ್ ಎಂಬುವವರ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಹದಿನೈದು ದಿನಗಳ ಹಿಂದೆ ಹೆಬ್ಬನಹಳ್ಳಿಯಲ್ಲಿ ಮೂವರ ಮೇಲೆ ದಾಳಿ ಮಾಡಿತ್ತು.