ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟವಾದ ಬೆನ್ನಲ್ಲೇ ಅಕ್ರಮಗಳ ಹಣ ಮತ್ತು ವಸ್ತುಗಳ ದಾಸ್ತಾನಿನ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಇದರ ಬೆನ್ನಲ್ಲೇ ಯಾವುದೆ ದಾಖಲೆಗಳಿಲ್ಲದೆ ಕೊಂಡೊಯ್ಯುತ್ತಿದ್ದ ಬರೋಬ್ಬರಿ ತೊಂಬತ್ತೊಂಬತ್ತು ಲಕ್ಷದ ಇಪ್ಪತ್ತು ಸಾವಿರ ನಗದು (99,20,000) ಹಣವನ್ನು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಿಡಘಟ್ಟ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಿಡಘಟ್ಟ ಚೆಕ್ ಪೋಸ್ಟ್ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಇಷ್ಟೊಂದು ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ. ಈ ಹಣವನ್ನು ಕ್ರೇಟಾ ಕಾರಿನಲ್ಲಿ ಬೇರೆಡೆಗೆ ಸಾಗಣೆ ಮಾಡಲಾಗುತ್ತಿತ್ತು. ನಿಡಘಟ್ಟ ಚೆಕ್ ಪೋಸ್ಟ್ನಲ್ಲಿ ಕಾರು ತಪಾಸಣೆ ನಡೆಸಿದ ವೇಳೆ ಚೀಲದಲ್ಲಿ ತುಂಬಿಸಿದ್ದ ಕಂತೆಗಟ್ಟಲೆ ಹಣ ಪತ್ತೆಯಾಗಿದೆ. ಚೀಲದಲ್ಲಿ ತುಂಬಿಸಿಟ್ಟಿದ್ದ 99,20,000 ನಗದು, ಕ್ರೇಟಾ ಕಾರನ್ನು ಜಪ್ತಿ ಮಾಡಿರುವ ಪೊಲೀಸರು, ಹಣ ಸಾಗಿಸುತ್ತಿದ್ದ ಗಿರೀಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಆದರೆ ಪೊಲೀಸರ ವಿಚಾರಣೆ ವೇಳೆಯೂ ಕೊಂಡೊಯ್ಯುತ್ತಿದ್ದ ಹಣಕ್ಕೆ ಸೂಕ್ತ ದಾಖಲೆ, ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಹಣ ಹಾಗೂ ಕಾರನ್ನು ಜಪ್ತಿ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲೂ ಹಣ ಮತ್ತು ಆಮಿಷವೊಡ್ಡುವ ಹಲವು ಬೆಲೆ ಬಾಳುವ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.