ನ್ಯೂಸ್ ನಾಟೌಟ್: ಟಿಕೆಟ್ ಕೈತಪ್ಪಿದ ಕಾರಣದಿಂದ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಇಂದು ಮಹತ್ವದ ಪತ್ರಿಕಾಗೋಷ್ಠಿ ಕರೆದಿದ್ದರು. ಇದರಲ್ಲಿ ಎಲ್ಲಾ ವಿಚಾರಗಳನ್ನೂ ಹೇಳಲಿಚ್ಛಿಸುತ್ತೇನೆ ಎಂದಿದ್ದರು. ಆದರೆ ಇದೀಗ ಏಕಾಏಕಿ ಪತ್ರಿಕಾಗೋಷ್ಠಿಯನ್ನು ರದ್ದು ಮಾಡಿದ್ದಾರೆ. ಗೌಡರ ಈ ನಡೆ ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಡಿವಿಎಸ್ ಅವರಿಗೆ ಬಿಜೆಪಿಯು ಎಲ್ಲವನ್ನೂ ಕೊಟ್ಟಿದೆ.ಅಧಿಕಾರದಲ್ಲಿ ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಕೇಂದ್ರದ ಮಂತ್ರಿಯಲ್ಲಿಯವರೆಗೆ ಹುದ್ದೆಗಳನ್ನು ಅಲಂಕರಿಸಿದ್ದರು. ಹೀಗಿರುವಾಗ ಟಿಕೆಟ್ ಕೈ ತಪ್ಪಿದೆ ಅನ್ನೋದಕ್ಕೆ ಅಸಮಾಧಾನಗೊಂಡಿರೋದ್ರಲ್ಲಿ ಯಾವುದೇ ಅರ್ಥವಿಲ್ಲ ಎಂದು ಜನರಾಡಿಕೊಂಡಿದ್ದರು.ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರ ಭೇಟಿ ಕೂಡ ಭಾರಿ ಕುತೂಹಲವನ್ನುಂಟು ಮಾಡಿತ್ತು.
ಈ ಬಗ್ಗೆ ಇಂದು ಸುದ್ದಿಗೋಷ್ಟಿ ಕರೆದು ನಿರ್ಧಾರ ತಿಳಿಸುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಡಿವಿಎಸ್ ಹೇಳಿದ್ದರು. ಎಲ್ಲ ಮಾಧ್ಯಮಗಳಿಗೂ ಇದರಲ್ಲಿ ಭಾಗವಹಿಸುವಂತೆ ಸಂದೇಶವನ್ನೂ ನೀಡಿದ್ದರು. ಇದರಲ್ಲಿ ಅವರು ತಮ್ಮ ಮುಂದಿನ ನಿಲುವನ್ನು ವ್ಯಕ್ತಪಡಿಸುವವರಿದ್ದರು. ಆದರೆ, ಇದೀಗ ಪತ್ರಿಕಾಗೋಷ್ಠಿಯನ್ನು ದಿಢೀರಾಗಿ ಮುಂದೂಡಿದ್ದಾರೆ. ಅಸಮಾಧಾನಗೊಂಡಿದ್ದ ಹಿನ್ನೆಲೆಯಲ್ಲಿ ಅವರಿಗೆ ವರಿಷ್ಠರಿಂದ ಸಂದೇಶವೇನಾದರೂ ಬಂದಿದೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಸದಾನಂದ ಗೌಡ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ ಅಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ನೀಡಲಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಸ್ಥಳೀಯ ಬಿಜೆಪಿಗರಿಂದಲೇ ಶೋಭಾಗೆ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಅವರನ್ನು ಕರೆತಂದು ಬೆಂಗಳೂರು ಉತ್ತರದಲ್ಲಿ ಟಿಕೆಟ್ ಕೊಡಲಾಗಿದೆ. ಈ ನಡುವೆ ಅವರಿಗೆ ಬೆಂಗಳೂರು ಉತ್ತರದಲ್ಲೂ ವಿರೋಧ ವ್ಯಕ್ತವಾಗುತ್ತಿದೆ.
ಸೋಮವಾರ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಡಿವಿ ಸದಾನಂದ ಗೌಡ ಸದ್ಯ ಒಂದು ದಿನ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ವರಿಷ್ಠರ ಜೊತೆಗೆ ಚರ್ಚೆ ನಡೆಸಲು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ದಿಲ್ಲಿಗೆ ತೆರಳಿದ್ದಾರೆ. ಇದಕ್ಕೂ ಮುನ್ನ ಅವರು ಬಿಜೆಪಿ ಪ್ರಮುಖರ ಜೊತೆ ಸಭೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸದಾನಂದ ಗೌಡರು ಸದ್ಯ ಯಾವುದೇ ನಿರ್ಧಾರವನ್ನು ಪ್ರಕಟಿಸದೆ ಇರಲು ತೀರ್ಮಾನಿಸಿದ್ದಾರೆ.
ಸದಾನಂದ ಗೌಡ ಮಾಜಿ ಮುಖ್ಯಮಂತ್ರಿಯಾಗಿದ್ದು, ಈಗಾಗಲೇ ಮತ್ತೋರ್ವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನೋರ್ವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೂ ಟಿಕೆಟ್ ಬಹುತೇಕ ಖಚಿತವಾಗಿದೆ. ಇಂತಹ ಸಂದರ್ಭದಲ್ಲಿ ತಮಗೆ ಟಿಕೆಟ್ ಕೈತಪ್ಪಿಸಿರುವುದು ಡಿವಿಎಸ್ ಅಸಮಾಧಾನಕ್ಕೆ ಕಾರಣವಾಗಿದೆ.
ವರಿಷ್ಠರ ಜೊತೆಗಿನ ಸಭೆಯಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಪಕ್ಷದಲ್ಲಿನ ಗೊಂದಲಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಡಿವಿ ಸದಾನಂದ ಗೌಡ ತಮ್ಮ ಮುಂದಿನ ನಿಲುವು ವ್ಯಕ್ತಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.