ನ್ಯೂಸ್ ನಾಟೌಟ್ : ಲೋಕಸಭಾ ಚುನಾವಣೆಯ ಟಿಕೆಟ್ ವಿಚಾರವಾಗಿ ಬಾರಿ ಕಸರತ್ತುಗಳು ನಡಿತಿವೆ.ಇದರ ಮಧ್ಯೆ ಇಷ್ಟು ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಡಿವಿಎಸ್ ಅವರನ್ನು ಕಾಂಗ್ರೆಸ್ ನಾಯಕರು ಸಂಪರ್ಕ ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು.ಬಿಜೆಪಿಯಲ್ಲಿದ್ದುಕೊಂಡೇ ಹಲವು ಹುದ್ದೆಗಳನ್ನು ಅಲಂಕರಿಸಿದ್ದ ಡಿವಿಎಸ್ ಅವರು ಕಾಂಗ್ರೆಸ್ ನಾಯಕರು ಸಂಪರ್ಕಿಸಿರೋದ್ರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿವಿಎಸ್ ಅವರು ಕಾಂಗ್ರೆಸ್ ನಾಯಕರು ಬೇಟಿಯಾಗಿದ್ದು ನಿಜ ಎಂದು ಹೇಳಿದ್ದಾರೆ.ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಿದ ಡಿ.ವಿ. ಸದಾನಂದಗೌಡರು, ಇಂದು ನನ್ನ ಹುಟ್ಟುಹಬ್ಬ. ಇದರ ಬಗ್ಗೆ ಕುಟುಂಬದ ಜೊತೆಗೆ ಮಾತುಕತೆ ಮಾಡಬೇಕಿದೆ. ಇಂದು ಮಾತನಾಡಿ, ನಾಳೆ ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸುತ್ತೇನೆ. ನಾನು ನನ್ನ ನಿಲುವು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ನನ್ನ ಪಕ್ಷದ ಪ್ರಮುಖರೊಬ್ಬರು ನನ್ನ ಜೊತೆಗೆ ಸಮಾಲೋಚನೆ ಮಾಡಿದ್ದಾರೆ.ನಿನ್ನೆ ನಮ್ಮ ಮನೆಗೆ ಆಗಮಿಸಿ, ಮಾತುಕತೆ ಮಾಡಿದ್ದಾರೆ. ಅವರು ಹೇಳಿರುವ ಮಾತನ್ನು ನಾನು ಈಗ ಹೇಳಲು ಆಗಲ್ಲ. ನಿಮಗೆ ಏನೇ ಸುದ್ದಿ ಬಂದರೂ ಅರ್ಧ ಘಂಟೆ, ಒಂದು ಘಂಟೆ ಮಾತ್ರ. ನಾಳೆ ಎಲ್ಲವನ್ನೂ ತಿಳಿಸುತ್ತೇನೆ.
ನರೇಂದ್ರ ಮೋದಿ ಆಗಮನದ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪರ ಬಂಡಾಯ ವಿಚಾರವಾಗಿ ಮಾತನಾಡಿದ ಡಿವಿಎಸ್, ನಾನು ಈಶ್ವರಪ್ಪರ ಬಳಿ ಮಾತನಾಡಿದ್ದೆ. ನಾನು ಅವರಿಗೆ ಹೇಳಿದ್ದೇನೆ ಯಾರಿಗೆಲ್ಲಾ ಅನ್ಯಾಯ ಆಗಿದೆಯೋ, ಅವರೆಲ್ಲಾ ಒಂದುಗೂಡಿ ಹೈಕಮಾಂಡ್ ನಾಯಕರ ಬಳಿ ಹೋಗೋಣ ಎಂದಿದ್ದೆ. ಆದರೆ, ಈಶ್ವರಪ್ಪನವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಅದು ಅವರ ನಿಲುವು. ಅವರ ನಿಲುವು ಬಗ್ಗೆ ನಾನೇನು ಹೇಳುವುದಿಲ್ಲ. ನಾನು ನಾಳೆ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದಿದ್ದಾರೆ.
ಡಿ.ವಿ.ಸದಾನಂದಗೌಡ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದು, ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇವರ ಹೆಸರು ಕಾಣಿಸಿಕೊಂಡಿಲ್ಲ. ನಾನು ಕೂಡ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದರೂ ಸಹ ಬಿಡುಗಡೆಯಾದ ಅಭ್ಯರ್ಥಿ ಪಟ್ಟಿಯಲ್ಲಿ ಇವರ ಹೆಸರಿರಲಿಲ್ಲ. ಇದೀಗ ಡಿವಿಎಸ್ ಕಾಂಗ್ರೆಸ್ ಪಕ್ಷ ಸೇರುತ್ತಾರೋ? ಇಲ್ಲವೋ ಎಂಬ ಬಗ್ಗೆ ನಾಳೆ ಹೇಳುವುದಾಗಿ ತಿಳಿಸಿದ್ದಾರೆ.