ನ್ಯೂಸ್ ನಾಟೌಟ್ :ಚಿನ್ನಾಭರಣ ಮಳಿಗೆಗಳಲ್ಲೊಂದಾದ ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ನವರು ಪ್ರಸ್ತುತ ವರ್ಷ ಮಹಿಳಾ ದಿನಾಚರಣೆ ಪ್ರಯುಕ್ತ ತಾಲೂಕಿನ ಸಾಧಕ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿದೆ. ಈ ಹಿನ್ನಲೆ “ಜಿ ಎಲ್ ವುಮನ್ ಆಫ್ ಗೋಲ್ಡ್” ಎಂದು ತಮ್ಮೆಲ್ಲಾ ಶಾಖೆಗಳಿಂದ ಇಬ್ಬರನ್ನು ಆಯ್ಕೆ ಮಾಡಿದೆ.
ಸುಳ್ಯ ಶಾಖೆಯಿಂದ ಸುಳ್ಯದ ಉಪನ್ಯಾಸಕರು, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿ ಹಾಗೂ ಸಂಪಾಜೆಯ ಗೃಹಿಣಿ, ಸಾಹಿತಿ ಸಹನಾ ಕಾಂತಬೈಲು 2024 ರ ಮಹಿಳಾ ದಿನಾಚರಣೆಯ “ಜಿ ಎಲ್ ವುಮನ್ ಆಫ್ ಗೋಲ್ಡ್” ಆಗಿ ಆಯ್ಕೆಯಾಗಿದ್ದಾರೆ. ಡಾ ಅನುರಾಧಾ ಕುರುಂಜಿಯವರು ಉಪನ್ಯಾಸಕರಾಗಿದ್ದು, ಶೈಕ್ಷಣಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದರೊಂದಿಗೆ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ ಗುರುತಿಸಿಕೊಂಡಿದ್ದಾರೆ.
ಸಹನಾ ಕಾಂತಬೈಲು ಅವರು ಗೃಹಿಣಿಯಾಗಿದ್ದು ಕೃಷಿ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದರೊಂದಿಗೆ ಸಾಹಿತಿಯಾಗಿ ಗುರುತಿಸಿಕೊಂಡಿದ್ದಾರೆ. ಜೇನು ಕೃಷಿ, ಹೈನುಗಾರಿಕೆ ಮೊದಲಾದ ಕೃಷಿ ಸಂಬಂಧಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಹಿತಿಯಾಗಿ ರಾಜ್ಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಹತ್ತು ಹಲವು ಪ್ರಶಸ್ತಿಗಳನ್ನು ಸ್ವೀಕರಿಸಿದುದೇ ಇವರ ಕಾರ್ಯಚಟುವಟಿಕೆಗಳ ಮೆರುಗು.