ನ್ಯೂಸ್ ನಾಟೌಟ್: ಎಲ್ಲಿ ನೋಡಿದರೂ ನೀರಿಗಾಗಿ ಜನ ಪರದಾಡುವಂತಾಗಿದೆ. ಆದರೆ ಈ ನಡುವೆ ಸಿಎಂ ಕಚೇರಿಗೂ ನೀರಿನ ಸಮಸ್ಯೆಯ ಬಿಸಿ ಮುಟ್ಟಿದೆ.ರಾಜ್ಯದಲ್ಲಿ ನೀರಿನ ಸಮಸ್ಯೆ ದಿನಕಳೆದಂತೆ ಹೆಚ್ಚಾಗುತ್ತಿದೆ. ಸಿಎಂ ಕಚೇರಿಗೂ ನೀರಿನ ಸಮಸ್ಯೆ ಎದುರಾಗಿದೆ.
ಹೀಗಾಗಿ ಜಲಮಂಡಳಿ ಟ್ಯಾಂಕರ್ನಿಂದ ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಕಚೇರಿಗೆ ಇಂದು(ಮಾರ್ಚ್ ೫) ನೀರು ಪೂರೈಕೆ ಮಾಡಲಾಗಿದೆ. ಸಿಎಂ ಕಚೇರಿಯಲ್ಲಿ ನೀರಿಲ್ಲ ಎನ್ನುವ ಸುದ್ದಿ ಜನರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಸಿಎಂ ಕಚೇರಿಗೇ ನೀರಿಲ್ಲ ಎನ್ನುವುದಾದರೆ ಜನಸಾಮಾನ್ಯರ ಗತಿ ಏನು ಎಂದು ಎಲ್ಲರೂ ಹೇಳಿಕೊಳ್ಳುವಂತಾಗಿದೆ.
ಇನ್ನೂ ಬೇಸಿಗೆ ಆರಂಭವಾಗಿಲ್ಲ. ಆರಂಭದಲ್ಲೇ ಡ್ಯಾಂಗಳಲ್ಲಿ ನೀರು ಕಾಣಸಿಗುತ್ತಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಮೂಲಗಳು ಬತ್ತಿ ಹೋಗಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಿಗದೇ ಹೋಗುವ ಆತಂಕ ಎದುರಾಗಿದೆ. ಹೀಗಾಗಿ ಈಗಾಗಲೇ ಬೇಸಿಗೆ ಮುನ್ನವೇ ಬೆಂಗಳೂರಿಗೆ ಬರಗಾಲ ಎದುರಾಗಿದೆ. ಇಷ್ಟು ಮಾತ್ರವಲ್ಲದೆ ಕುಡಿಯುವ ನೀರಿನ ಟ್ಯಾಂಕರ್ ಮಾಫಿಯಾ ಕೂಡ ಶುರುವಾಗಿದೆ ಎಂದು ಜನರು ಆರೋಪಿಸುತ್ತಿದ್ದಾರೆ.ಈ ಬಗ್ಗೆ ಡಿಸಿಎಂ ಸಭೆ ಮಾಡಿದರೂ ನೀರಿನ ಟ್ಯಾಂಕರ್ ಮಾಫಿಯಾ ತಡೆಗಟ್ಟಲು ಕೆಲ ಕ್ರಮಗಳನ್ನು ಕೈಗೊಂಡಿದ್ದಾರೆ. ಕುಡಿಯುವ ನೀರಿನ ಟ್ಯಾಂಕರ್ ಮಾಫಿಯಾ ತಡೆಯಲು ಸಿಎಂ ಕೂಡ ಖುದ್ದು ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.