‘ಸತ್ಯ-ಸುಳ್ಳು’ ಒಂದೇ ನಾಣ್ಯದ ಎರಡು ಮುಖಗಳು. ಮನುಷ್ಯನ ಜೀವನದಲ್ಲಿ ಇವೆರಡು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಾರ್ಯಾಚರಿಸುತ್ತಿರುತ್ತವೆ. ಸತ್ಯ ಹೇಳಿ ಹಲವರ ಜೀವ-ಜೀವನ ಉಳಿದುಕೊಂಡಿದ್ದರೇ ಸುಳ್ಳು ಹೇಳಿದ್ದರಿಂದ ಹಲವರ ಬದುಕೇ ಕತ್ತಲಾಗಿದೆ. ಈ ಎರಡು ಘಟನೆಗಳಿಗೆ ಇರೊ ಸಾಮ್ಯತೆ ಒಂದೇ. ಮೊದಲನೆಯದ್ದು ಪುಣ್ಯದ ಕೆಲಸ, ಎರಡನೆಯದ್ದು ಪಾಪದ ಕಾರ್ಯ. ತಮ್ಮ ತಟ್ಟೆಯಲ್ಲಿ ಮೃಷ್ಟಾನ್ನ ಭೋಜನವೇ ಇದ್ದರೂ ಪಕ್ಕದವನ ತಟ್ಟೆಯಲ್ಲಿ ಏನಿದೆ..? ಹೇಗಾದರೂ ಕಿತ್ತುಕೊಳ್ಳಬೇಕೆಂಬ ಮನೋಭಾವನೆ. ದೇವರು ತಮ್ಮ ಮಕ್ಕಳು-ಮೊಮ್ಮಕ್ಕಳ ಕಾಲಕ್ಕೆ ಆಗುವಷ್ಟು ಹಣ-ಆಸ್ತಿ ನೀಡಿದ್ದರೂ ಮನುಷ್ಯನಿಗೆ ಮತ್ತೂ ಬೇಕು ಅನ್ನುವ ಅತಿಯಾಸೆ. ಮತ್ತೊಬ್ಬನ ತಟ್ಟೆಯಲ್ಲಿ ಇದ್ದುದ್ದನ್ನು ಕಿತ್ತುಕೊಂಡಾದರೂ ಬದುಕುವ ಹೊಲಸು ಮನಃಸ್ಥಿತಿ. ತಿದ್ದಿಬುದ್ಧಿ ಹೇಳಬೇಕಿರುವವರೇ ಇಂತಹ ಕೆಲಸ ಮಾಡುತ್ತಿರೋದು ಸಮಾಜದ ಬೆಳವಣಿಗೆ ದೃಷ್ಟಿಯಿಂದ ಮಾರಕ.
ಹೌದು, ಸ್ನೇಹಿತರೊಬ್ಬರನ್ನು ಇತ್ತೀಚಿಗೆ ಭೇಟಿಯಾಗಿದ್ದೆ. ಈ ಸಂದರ್ಭ ಹಲವಾರು ವಿಚಾರಗಳು ಚರ್ಚೆಯಾದವು. ಈ ವೇಳೆ ಪ್ರತಿಭಾವಂತ ಯುವಕನೊಬ್ಬನ ಪ್ರಯತ್ನವನ್ನು ಇನ್ನಿಲ್ಲವಾಗಿಸಲು ನಮ್ಮ ಸಮಾಜದ ಕೆಟ್ಟ ಶಕ್ತಿಗಳು ಪ್ರಯತ್ನಿಸಿದ ಕಥೆ ಕೇಳಿ ಮನಸ್ಸು ಮಮ್ಮುಲ ಮರುಗಿತು. ಸಮಾಜದಲ್ಲಿ ಒಳ್ಳೆಯದು ಎಷ್ಟಿದೆಯೋ ಅಷ್ಟೇ ಕೆಟ್ಟದು ಕೂಡ ಇದೆ. ಕೆಟ್ಟ ಸಮಾಜದ ಮತ್ತೊಂದು ಮುಖವನ್ನು ಅವರು ತೆರೆದಿಡುತ್ತಲೇ ಹೋದರು. ಅವರು ಹೇಳಿದಿಷ್ಟು.. ‘ಒಬ್ಬ ವ್ಯಕ್ತಿ ಬಡತನದ ನಡುವೆ ಬೆಳೆದಿದ್ದ. ಆತನಿಗೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅನ್ನೊ ಛಲವಿತ್ತು. ಆತನ ಬಳಿ ವಿದ್ಯೆ, ಅಪಾರ ಬುದ್ಧಿವಂತಿಕೆ ಇತ್ತು. ಆದರೆ ಹಣ ಮಾತ್ರ ಇರಲಿಲ್ಲ. ವಿದ್ಯೆ, ಬುದ್ಧಿವಂತಿಕೆ ಇದ್ದರೂ ಹಣವಿಲ್ಲದೆ ನಾನು ಸಮಾಜದಲ್ಲಿ ಮುಂದೇ ಬರೋಕೆ ಸಾಧ್ಯವೇ..? ಎಂದು ಕೊರಗುತ್ತಿದ್ದ. ವಿದ್ಯೆ, ಬುದ್ಧಿವಂತಿಕೆ ಇದ್ದರೆ ಖಂಡಿತವಾಗಿ ಮುಂದೆ ಬರಬಹುದು ಎಂದು ನಾನು ಅವನಿಗೆ ಧೈರ್ಯ ಹೇಳಿದೆ. ನನ್ನ ಮಾತಿನಿಂದ ಸ್ಫೂರ್ತಿ ಪಡೆದ ಯುವಕ ಸಮಾಜದಲ್ಲಿ ನಾನೂ ಒಬ್ಬ ವ್ಯಕ್ತಿಯಾಗಿ ಬದುಕಬೇಕು ಎಂದು ಸಣ್ಣ ಉದ್ಯಮವನ್ನು ಆರಂಭಿಸಿದ. ಈತನ ಉದ್ಯಮ ದಿನದಿಂದ ದಿನಕ್ಕೆ ಏಳಿಗೆ ಕಾಣುವುದಕ್ಕೆ ಶುರುವಾಯಿತು. ಒಂದಷ್ಟು ಜನರಿಗೆ ಕೆಲಸವೂ ಸಿಕ್ಕಿತು. ಇದೇ ವೇಳೆ ಈತನ ಅಭಿವೃದ್ಧಿಯನ್ನು ಸಹಿಸದ ಶಕ್ತಿ ಯುವಕನನ್ನು ಹೇಗಾದರೂ ಕೆಳಗಿಳಿಸಬೇಕು, ಮಾರುಕಟ್ಟೆಯಲ್ಲಿ ಆತನಿಗೆ ಬೆಲೆಯೇ ಇರಬಾರದು, ನಾಲ್ಕು ದಿನದಲ್ಲಿ ಅಂಗಡಿ ಮುಚ್ಚಿ ಹೋಗಬೇಕೆಂದು ಪ್ಲಾನ್ ಮಾಡಿದ. ಆತನಿಗೆ ಬರುವ ವ್ಯವಹಾರ ಹಾಗೂ ಗ್ರಾಹಕರನ್ನು ಟ್ರ್ಯಾಪ್ ಮಾಡಿಸಿದ. ಅದರಂತೆ ಆಯಿತೂ ಕೂಡ. ಎಮೋಷನಲ್ ಬ್ಲ್ಯಾಕ್ ಮೇಲ್ ಜೊತೆಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ಹೋದ. ಇದರಿಂದಾಗಿ ಯುವಕನ ಉದ್ಯಮ ಹಾಳಾಗೋಕೆ ಶುರುವಾಯಿತು. ಆತ ನೆಲಕಚ್ಚುವ ಪರಿಸ್ಥಿತಿಗೆ ತಲುಪಿದ ಎಂದು ವಿವರಿಸಿದ. ಇದಕ್ಕೆ ಏನು ಉತ್ತರ ಕೊಡುವುದೆಂದೂ ತಿಳಿಯದೆ ನಾನು ಮೌನಕ್ಕೆ ಶರಣಾದೆ. ಆತನ ಮಾತುಗಳು ಮುಂದುವರಿದವು. ‘ನೋಡೋ ನಮ್ಮ ಸಮಾಜ..ಬೆಳೆಯುವವರನ್ನು ಹೆಚ್ಚು ತುಳಿಯುತ್ತೆ. ಒಳ್ಳೆಯದನ್ನ ಪ್ರೋತ್ಸಾಹಿಸುವ ಜನರೇ ಇಂದು ಕಡಿಮೆ. ತುಳಿದು ಬದುಕುವವನೇ ಊರಿಗೆ ದೊಡ್ಡವನಾಗಿರುತ್ತಾನೆ. ಸಾಲದು ಅಂತ ಸಮಾಜಕ್ಕೆ ಆತನ ಉಪದೇಶದ ಮಾತುಗಳು ಕೂಡ ಬೇರೆ..’ ಎಂದ. ‘ಹಾಗಾದರೆ ಆ ಯುವಕನ ಬದುಕು ಮುಗಿಯಿತೇ..? ‘ಎಂದು ನಾನು ಗೆಳೆಯನನ್ನು ಪ್ರಶ್ನಿಸಿದೆ. ಅದಕ್ಕೆ ಅವರು ಉತ್ತರಿಸಿದ್ದು ..’ಖಂಡಿತಾ ಇಲ್ಲ. ಮನುಷ್ಯ ಕೈಬಿಟ್ಟರೂ ಆ ದೇವರು ಅವನನ್ನು ಕೈಬಿಡಲಿಲ್ಲ. ಒಂದೆರಡು ವರ್ಷ ಸುಳ್ಳು ಹೇಳಿಕೊಂಡು ಈತನ ವ್ಯವಹಾರವನ್ನು ಹಾಳು ಮಾಡಲು ಯತ್ನಿಸಿದ ವ್ಯಕ್ತಿಯ ಬಂಡವಾಳ ಕೊನೆಗೆ ಜನರಿಗೆ ಗೊತ್ತಾಯಿತು. ತನ್ನಿಂದ ತಾನೇ ಈತನಿಗೆ ಸಿಗಬೇಕಾದ ಕೆಲಸಗಳು ಮತ್ತೆ ಸಿಕ್ಕವು. ಕೊನೆಗೂ ಆತನ ತಾಳ್ಮೆ ಗೆದ್ದಿತು’ ಎಂದು ವಿವರಿಸಿದರು. ಗೆಳೆಯ ಮಾತು ಮುಗಿಸುವಷ್ಟರಲ್ಲಿ ನನಗೆ ಅನ್ನಿಸಿದಿಷ್ಟು. ಮೊದಲನೆಯದ್ದು ಮತ್ತೊಬ್ಬರ ಬದುಕನ್ನು ಕಿತ್ತುಕೊಳ್ಳೋದು ತಪ್ಪು. ಸಮಾಜ ಇರೋದು ಎಲ್ಲರಿಗಾಗಿ ಎಲ್ಲರೂ ಬದುಕುವುದಕ್ಕೋಸ್ಕರ. ಸಮಾಜ ಯಾರೋ ಒಬ್ಬನ ಸ್ವತ್ತಲ್ಲ. ನಾನು ಮಾತ್ರ ಇಲ್ಲಿ ಇರಬೇಕು ಬೇರೆಯವರು ಯಾರು ಬದುಕಲೇ ಬಾರದು ಅನ್ನುವ ನಿಯಮ ಸರಿ ಅಲ್ಲ. ತಾವು ಬದುಕುವುದರ ಜೊತೆಗೆ ಮತ್ತೊಬ್ಬರನ್ನು ಬದುಕಲು ಬಿಡಬೇಕು. ಅವರು ಮಾಡುವ ಪ್ರಯತ್ನ ಅವರಿಗಾಗಿ. ನೀವು ಮಾಡುವ ಪ್ರಯತ್ನ ನಿಮಗಾಗಿ. ಅದನ್ನು ಬಿಟ್ಟು ಕಂಡವರ ಊಟದ ತಟ್ಟೆಗೆ ಕೈ ಹಾಕುವ ಪ್ರಯತ್ನ ನಡೆಸಿದರೆ ಒಳ್ಳೆಯದಂತೂ ಆಗುವುದೇ ಇಲ್ಲ. ಮತ್ತೊಬ್ಬರ ಬೆಳವಣಿಗೆಯನ್ನೂ ಗೌರವಿಸೋಣ ಏನಂತೀರಾ..?