ನ್ಯೂಸ್ ನಾಟೌಟ್ : ಲೋಕಸಭಾ ಚುನಾವಣೆ 2024ಕ್ಕೆ ದಿನಗಣನೆ ಆರಂಭವಾಗಿದೆ.ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ತಯಾರಿಯನ್ನು ನಡೆಸುತ್ತಿವೆ.ಕ್ಷಣ ಕ್ಷಣಕ್ಕೂ ಕುತೂಹಲ.ಹೊಸಬರಿಗೆ ಮಣೆ ಸೇರಿದಂತೆ ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಸಿಗುತ್ತೆ ಅನ್ನೊ ಚರ್ಚೆ. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಿಂದ ಕಣಕ್ಕಿಳಿಯಲಿರುವ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಬದಲಾಯಿಸಿದೆ. ಹಾಲಿ ಸಂಸದ ನಳೀನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನೀಡುವ ಬಗ್ಗೆ ಸಾಕಷ್ಟು ಗೊಮದಲಗಳಿದ್ದವು. ಅದಕ್ಕೆ ತಕ್ಕಂತೆ, ಮಾ. 13ರಂದು ಬಿಡುಗಡೆಯಾದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಆ ಕ್ಷೇತ್ರಕ್ಕೆ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದರೂ ಕ್ಯಾಪ್ಟನ್ ಬ್ರಿಜೇಶ್ ಚೌಟ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ.ಅಂದ್ಹಾಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ. ಚೌಟಾ ಅವರು ಹುಟ್ಟಿದ್ದು 1981ರಲ್ಲಿ.42 ವರ್ಷದ ಬ್ರಿಜೇಶ್ ಚೌಟ ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಈ ಹಿಂದೆ, ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಆರ್ ಎಸ್ ಎಸ್ ನಲ್ಲಿದ್ದುಕೊಂಡು ಸಮಾಜ ಸೇವೆ ಮಾಡಿದ ಹೆಗ್ಗಳಿಕೆ ಇವರದ್ದು. ಮಂಗಳೂರಿನ ರಥಬೀದಿಯಲ್ಲಿ ಇವರ ನಿವಾಸ. ಬಂಟ ಸಮುದಾಯದ ಗುತ್ತಿನ ಮನೆಗೆ ಸೇರಿದ ಇವರು ಅವಿವಾಹಿತರು. ತಮ್ಮ ಜೀವನವನ್ನು ರಾಷ್ಟ್ರ ಸೇವೆಗಾಗಿ ಮುಡಿಪಾಗಿಟ್ಟ ವ್ಯಕ್ತಿ.
ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಗೆ ಇಳಿದ ಯುವ ನಾಯಕನನ್ನು ಬಿಜೆಪಿ ಸಂಸತ್ತಿಗೆ ಅಭ್ಯರ್ಥಿಯಾಗಿ ಆಯ್ದುಕೊಂಡಿದ್ದು ವಿಶೇಷಗಳಲ್ಲಿ ಒಂದು.ಮಾತ್ರವಲ್ಲ,ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದು ಬಂದ ವ್ಯಕ್ತಿಯೊಬ್ಬರಿಗೆ ಸಂಸತ್ ಸ್ಪರ್ಧೆಯ ಟಿಕೆಟ್ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ.ರಾಜ್ಯ ಬಿಜೆಪಿಯ ಚುನಾವಣಾ ಸಮಿತಿ ಭಾಗವಾಗಿರುವ ಯುವ ಸಂವಾದ ಘಟಕದಲ್ಲಿ ರಾಜ್ಯ ಸಹ ಸಂಚಾಲಕರಾಗಿ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಅಣ್ಣಮಲೈ ಅವರ ಜೊತೆ ರಾಜ್ಯಾದ್ಯಂತ ಪ್ರವಾಸ ಮಾಡಿ ಗಮನ ಸೆಳೆದಿದ್ದ ಚೌಟ ಅವರು ವಾಸ್ತವವಾಗಿ ಕಳೆದ ಬಾರಿಯೇ ಟಿಕೆಟ್ ರೇಸ್ನಲ್ಲಿದ್ದರು. ಆದರೆ ನಳಿನ್ ಕುಮಾರ್ ಕಟೀಲ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿತ್ತು. ಈ ಬಾರಿ ಕಾರ್ಯಕರ್ತರ ಪ್ರಬಲ ಪ್ರತಿರೋಧ ನಳಿನ್ ಕುಮಾರ್ಗೆ ಎನ್ನುತ್ತಿರುವಾಗಲೇ ದ.ಕ ಜಿಲ್ಲೆಯಲ್ಲಿ ನಳಿನ್ ಅವರಿಗೆ ಟಿಕೆಟ್ ಕೈ ತಪ್ಪಿದೆ.
ಬ್ರಿಜೇಶ್ ಚೌಟ ಅವರು ಮಂಗಳೂರಿನ ಮಿಲಾಗ್ರಿಸ್ ಸ್ಕೂಲ್ ನಲ್ಲಿ ಪ್ರಾಥಮಿಕ ಶಿಕ್ಷಣ, ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪಿಯುಸಿ,2022ರಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ, ಬಳಿಕ ಮಧ್ಯಪ್ರದೇಶದ ಇಂದೋರ್ ನಲ್ಲಿರುವ ಐಐಎಂ ನಲ್ಲಿ ಎಕ್ಸಿಕ್ಯೂಟಿವ್ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಪ್ರೋಗ್ರಾಂ ವಿಷಯದಲ್ಲಿ ಎಂಬಿಎ ಪದವಿ ಹೀಗೆ ಓದಿನಲ್ಲಿಯೂ ವಿಶೇಷ ಆಸಕ್ತಿ.ಚೌಟಾ ಅವರ ಸೇನಾ ತರಬೇತಿಯು 2003ರಲ್ಲಿ ಚೆನ್ನೈ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಶುರು.ದೇಶದ ನಾನಾ ಭಾಗಗಳಲ್ಲಿ ಸೇನಾ ಸಿಬ್ಬಂದಿಯಾಗಿ ದುಡಿದಿದ್ದಲ್ಲದೇ , ಅರಣ್ಯಗಳಲ್ಲಿ ಅಡಗಿರುವ ಶತ್ರುಗಳನ್ನು ಸದೆಬಡಿದು ಪಾಠ ಕಲಿಸಿದ್ದಾರೆ. ಗಡಿಗಳಲ್ಲಿ ಹಾಗೂ ವಿಶೇಷವಾಗಿ ಮಣಿಪುರ ಹಾಗೂ ಅಸ್ಸಾಂನಲ್ಲಿ ಒಳನುಸುಳುಕೋರರನ್ನು ಬಗ್ಗುಬಡಿಯುವ ಕಾರ್ಯಾಚರಣೆಗಳಲ್ಲಿ ಇವರು ಪಾಲ್ಗೊಂಡಿದ್ದು ಹೆಮ್ಮೆಯ ವಿಚಾರ.
ಶಾಲಾ – ಕಾಲೇಜು ಮಟ್ಟದಲ್ಲಿದ್ದಾಗಲೇ ಆರ್ ಎಸ್ ಎಸ್ ಜೊತೆಗೆ ಒಡನಾಟ ಹೊಂದಿದ್ದ ಇವರು , ಸೇನೆಯಿಂದ ನಿವೃತ್ತಿಯಾದ ನಂತರವೂ ಕೂಡ ಚೌಟಾ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ರು , 2013ರಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡ ಇವರು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೇರಿದಂತೆ , ಕರ್ನಾಟದ ಬಿಜೆಪಿಯ ರಾಜ್ಯಮಟ್ಟದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 2015ರಿಂದ ಕೇರಳ, ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಚುನಾವಣೆಗಳಲ್ಲಿ ಪಕ್ಷದ ಪರವಾಗಿ ಕರ್ತವ್ಯ ಮಾಡಿದ್ದಾರೆ. ಬೈಂದೂರು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಇವರ ಶ್ರಮ ವಹಿಸಿದ್ದರು ಅನ್ನೋದು ಗಮನಾರ್ಹ.
ಇದರ ಜತೆಜತೆಗೆ ಸಮರ್ಥನ್ ಫೌಂಡೇಶನ್ ಮೂಲಕ ಮಂಗಳೂರಿನಲ್ಲಿ ಅನೇಕ ಬಡವರಿಗೆ, ನಿರ್ಗತಿಕರಿಗೆ ಸೌಕರ್ಯಗಳನ್ನು ಕಲ್ಪಿಸಿ ಅವರ ಪಾಲಿನ ದೇವರಾಗಿದ್ದಾರೆ.ಸಾಹಿತ್ಯದಲ್ಲಿಯೂ ಅಪಾರ ಆಸಕ್ತಿ ಹೊಂದಿರುವ ಇವರು 2015ರಲ್ಲಿ ಕರಾವಳಿಯ ಜನಪದ ಕ್ರೀಡೆಯಾದ ಕಂಬಳ ನಿಷೇಧಕ್ಕೊಳಗಾದಾಗ ಅದರ ವಿರುದ್ಧ ದನಿಯೆತ್ತಿ ಹೋರಾಡಿದವರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಂಬಳಕ್ಕೆ ಒಂದು ಹಂತದ ಜಯ ಸಿಕ್ಕ ಬೆನ್ನಲ್ಲೇ ಮಂಗಳೂರು ನಗರದಲ್ಲಿಯೇ ಕಂಬಳ ಆಯೋಜಿಸಬೇಕೆಂದು ನಿಶ್ಚಯಿಸಿ,ಯುವ ಸ್ನೇಹಿತರ ಬಳಗವನ್ನು ಕಟ್ಟಿಕೊಂಡು ಸತತ ಏಳು ವರ್ಷಗಳಿಂದ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಕಂಬಳ ಆಯೋಜನೆ ಮಾಡಿದ್ದರು. ಹೀಗೆ ಎಲ್ಲ ಕ್ಷೇತ್ರದಲ್ಲೂ ಗಣನೀಯ ಸೇವೆ ಸಲ್ಲಿಸುತ್ತಿರುವ ಚೌಟ ಅವರಿಗೆ ಟಿಕೆಟ್ ಸಿಕ್ಕಿದ್ದು ನಿಜಕ್ಕೂ ಉತ್ತಮ ಆಯ್ಕೆ ಅನ್ನೋದು ಪ್ರಜ್ಞಾವಂತ ಮತದಾರರ ಅಭಿಪ್ರಾಯ.ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ..