ನ್ಯೂಸ್ ನಾಟೌಟ್ : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ವಿಚಾರಗಳು ಬಯಲಿಗೆ ಬರುತ್ತಿದೆ.ಇದೀಗ ಓರ್ವನನ್ನು ರಾಷ್ಟ್ರೀಯ ತನಿಖಾ ದಳ (NIA) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಬಳ್ಳಾರಿ ಮಾಡ್ಯೂಲ್ನ (ISIS Ballari Module) ಶಂಕಿತ ಉಗ್ರ ಮಿನಾಜ್ ಅಲಿಯಾಸ್ ಸುಲೇಮಾನ್ ಮಾಹಿತಿ ಮೇರೆಗೆ ಓರ್ವ ಶಂಕಿತನ ವಶಕ್ಕೆ ಪಡೆದ ಎನ್ಐಎ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದೆ.ಸದ್ಯ ಜೈಲಿನಲ್ಲಿರುವ ಸುಲೇಮಾನ್ನನ್ನು ಬಾಡಿ ವಾರಂಟ್ ಮೇಲೆ ವಿಚಾರಣೆ ನಡೆಸಲು ನ್ಯಾಯಾಲಯದಿಂದ ಎನ್ಐಎ ಅನುಮತಿ ಪಡೆದಿದೆ. ನ್ಯಾಯಾಲಯ ಮಾರ್ಚ್ 9ರವರೆಗೆ ಕಸ್ಟಡಿಗೆ ನೀಡಿದೆ. ಡಿ.18 ರಂದು ಎನ್ಐಎ ದಾಳಿ ನಡೆಸಿ ಬಳ್ಳಾರಿಯಲ್ಲಿ ಮಿನಾಜ್ ಅಲಿಯಾಸ್ ಸುಲೇಮಾನ್ ಬಂಧಿಸಿತ್ತು.
ಬಾಂಬ್ ಇಟ್ಟ ಬಳಿಕ ಬಾಂಬರ್ ಬೆಂಗಳೂರಿನಿಂದ ಬೀದರ್ ಬಸ್ಸಿನಲ್ಲಿ ತೆರಳಿ ಭಟ್ಕಳದ ಕಡೆಗೆ ಹೋಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು ಎನ್ಐಎ ಮತ್ತು ಸಿಸಿಬಿ ಪೊಲೀಸರು ಉಗ್ರನ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
ಐಸಿಸ್ನಿಂದ ಪ್ರೇರಣೆಗೊಂಡಿದ್ದ ಬಳ್ಳಾರಿ ಯುವಕ ಸುಲೈಮನ್ ಮತ್ತು ಸಹಚರರು ಬಳ್ಳಾರಿ ಐಸಿಸ್ ಮಾಡ್ಯೂಲ್ (ISIS Ballari Module) ಹೆಸರಿನಿಂದ ಗುರುತಿಸಿಕೊಂಡಿದ್ದರು. ಈ ಗುಂಪು ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತಿದ್ದರು.ಕಳೆದ 5 ವರ್ಷದಿಂದ ಪಿಎಫ್ಐ (PFI) ಸಂಘಟನೆಯಲ್ಲಿ ಇದ್ದ ಬಳ್ಳಾರಿ ಮೂಲದ ಸುಲೈಮನ್ ಬಳ್ಳಾರಿ ಘಟಕವನ್ನು ಆರಂಭಿಸಿದ್ದ. ಈತನಿಗೆ ಬಳ್ಳಾರಿಯ ಸೈಯ್ಯದ್ ಸಮೀರ್ ಸಹಕಾರ ನೀಡುತ್ತಿದ್ದ. ಬೆಂಗಳೂರು ಮತ್ತು ಬಳ್ಳಾರಿ, ಉತ್ತರ ಕರ್ನಾಟಕದಲ್ಲಿ ಬಾಂಬ್ ಸ್ಫೋಟಕ್ಕೆ ಇವರು ಪ್ಲ್ಯಾನ್ ಮಾಡುತ್ತಿದ್ದರು.
ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಧರ್ಮಕ್ಕಾಗಿ ಜೀವವನ್ನೇ ಬಲಿ ಕೊಡಲು ಸಿದ್ದರಿದ್ದರೋ ಅವರನ್ನೇ ಬಳಸಿಕೊಳ್ಳುತ್ತಿದ್ದರು. ಪಾಕಿಸ್ತಾನ, ಇರಾನ್, ಇರಾಕ್ ಪ್ರವಾಸದ ಬಳಿಕ ಜಿಹಾದಿಗಳನ್ನಾಗಿ ಮಾಡಲು ಸಂಚು ರೂಪಿಸಿದ್ದರು.