ನ್ಯೂಸ್ ನಾಟೌಟ್ :ಬಾಲ್ಯ ವಿವಾಹ ಪದ್ಧತಿಯನ್ನು ಬುಡ ಸಮೇತ ಕಿತ್ತು ಬಿಸಾಡಬೇಕು ಎಂಬ ನಿಯಮವಿದ್ದರೂ ಇಲ್ಲೊಬ್ಬಳು ಬಾಲಕಿ ಬಾಲ್ಯವಿವಾಹಕ್ಕೆ ಒಳಗಾಗಿ ಬಳಿಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಗ್ಗೆ ವರದಿಯಾಗಿದೆ.ಆಕೆಯನ್ನು ಮದುವೆಯಾದ ಯುವಕನನ್ನು ಪೊಲೀಸರು ಇದೀಗ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಈ ಘಟನೆ ನಡೆದಿದೆ. ಮಾರ್ಚ್ 13ರಂದು ನೀಲಂ ಕುಮಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣ ತಡವಾಗಿ ದಾಖಲಾಗಿದೆ. ಬಾಲಕಿಯನ್ನು ಬಾಲ್ಯ ವಿವಾಹ ಮಾಡಿಕೊಂಡು ಆಕೆಯ ಮಾನಸಿಕ ತಲ್ಲಣಕ್ಕೆ ಕಾರಣವಾಗಿ, ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ನೀಡಿದ್ದಕ್ಕಾಗಿ ಆಕೆಯನ್ನು ಬಾಲ್ಯವಿವಾಹವಾದ ಯುವಕ ವಿಶಾಲ್ ಕುಮಾರ್ ಸಹಾನಿಯನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ನೀಲಂ ಕುಮಾರ್ ಮತ್ತು ವಿಶಾಲ್ ಕುಮಾರ್ ಇಬ್ಬರೂ ಬಿಹಾರದವರು. ವಿಶಾಲ್ ಕುಮಾರ್ ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಅರಸಿಕೊಂಡು ಬಂದು ಇಲ್ಲೇ ನೆಲೆಸಿದ್ದ. ಯಶವಂತಪುರದಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಆತ ನೀಲಂ ಕುಮಾರಿ ಎಂಬಾಕೆಯನ್ನು ಬಾಲ್ಯ ವಿವಾಹವಾಗಿದ್ದ. ಕಳೆದ 2023ರ ಫೆಬ್ರವರಿಯಲ್ಲಿ ಅವರಿಬ್ಬರ ನಡುವೆ ಮದುವೆ ನಡೆದಿತ್ತು.
ಆದರೆ, ವಿಶಾಲ್ ಇದುವರೆಗೂ ನೀಲಂ ಕುಮಾರಿಯನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿರಲಿಲ್ಲ. ಬಿಹಾರದಿಂದ ಕಳೆದ ಇಪ್ಪತ್ತು ದಿನಗಳ ಹಿಂದೆ ವಿಶಾಲ್ ನೀಲಂ ಕುಮಾರಿಯನ್ನು ಕರೆದುಕೊಂಡು ಬಂದಿದ್ದ. ಹೆಬ್ಬಗೋಡಿ ಸಮೀಪದ ತಿರುಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ಅವರಿಬ್ಬರೂ ವಾಸವಾಗಿದ್ದರು.ಕಳೆದ ಮಾರ್ಚ್ 13ರಂದು ನೀಲಂ ಕುಮಾರಿ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಬಾಲ್ಯವಿವಾಹವಾಗಿ ಲೈಂಗಿಕವಾಗಿ ಬಳಸಿಕೊಂಡು ಮಾನಸಿಕ ಹಿಂಸೆ ನೀಡಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಶ್ರೀದೇವಿ ಎಂಬವರು ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೀಗ ಪೊಲೀಸರು ವಿಶಾಲ್ನನ್ನು ವಶಕ್ಕೆ ಪಡೆದಿದ್ದಾರೆ.